ಬೆಂಗಳೂರಿನ ಮಳೆಗೆ ಮಹಿಳೆ ಬಲಿ-ಧರೆಗುರುಳಿದ ಮರಗಳು

Public TV
1 Min Read

ಬೆಂಗಳೂರು: ಇಂದು ಸಂಜೆ ಉದ್ಯಾನ ನಗರಿಯಲ್ಲಿ ಸುರಿದ ಮಳೆಗೆ ಮಹಿಳೆ ಸಾವನ್ನಪ್ಪಿದ್ದಾರೆ.

22 ವರ್ಷದ ಶಿಲ್ಪಾ ಸಾವನ್ನಪ್ಪಿದ ಮಹಿಳೆ. ಮಳೆಯ ಅಬ್ಬರಕ್ಕೆ ನಿರ್ಮಾಣ ಹಂತದ ಕಟ್ಟಡದ ಇಟ್ಟಿಗೆ, ಕಲ್ಲುಗಳು ಪಕ್ಕದ ಮನೆಯ ಮೇಲೆ ಬಿದ್ದಿವೆ. ಪರಿಣಾಮ ಮನೆಯಲ್ಲಿದ್ದ ಶಿಲ್ಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಧನುಷ್ ಎಂಬ ಹುಡುಗ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ನಾಗರಭಾವಿ, ಪೀಣ್ಯ, ಯಲಹಂಕ, ಹೆಬ್ಬಾಳ, ನಾಗವಾರ, ಕೆ.ಆರ್.ಪುರಂ, ಜಯನಗರ, ಜೆಪಿನಗರ, ಬಿಟಿಎಂ ಲೇಔಟ್ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜೋರು ಮಳೆಯಾಗಿದೆ. ಯಶವಂತಪುರದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿದೆ, ಜೊತೆಗೆ ಮರದ ಕೊಂಬೆಗಳು ಬಿದ್ದು ಎರಡು ಕಾರ್ ಗಳು ಜಖಂ ಆಗಿವೆ. ಯಲಹಂಕದಲ್ಲಿ ಎರಡು ಹಾಗೂ ಆಡುಗೋಡಿ ಹಾಗೂ ಗೊರಗೊಂಟೆಪಾಳ್ಯದಲ್ಲಿ ಒಂದು ಮರ ಬಿದ್ದಿದೆ. ಬಿಟಿಎಂ ಲೇಔಟ್ ನಲ್ಲಿ ಟ್ರಾನ್ಸಫಾರಂ ಮೇಲೆ ಮರ ಬಿದ್ದು ಇಡೀ ಬಿಟಿಎಂ ಲೇಔಟ್ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಸಂಜೆ ಸುರಿದ ಭಾರೀ ಮಳೆಗೆ ವಾಹನ ಸವಾರರು ನರಕ ಅನುಭವಿಸಿದ್ರು. ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಮಾಗಡಿ ರೋಡ್ ಸುಂಕದ ಕಟ್ಟೆಯಲ್ಲಿ ನಾಲ್ಕು ಅಡಿಯಷ್ಟು ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗಿತ್ತು. ಬೆಂಗಳೂರಿನ ಡಬಲ್ ರೋಡ್, ವಿಲ್ಸನ್ ಗಾರ್ಡನ್ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದು, ಪಕ್ಕದಲ್ಲಿರುವ ಬಿಎಂಟಿಸಿ ಕ್ವಾಟರ್ಸ್ ಗೂ ನೀರು ನುಗ್ಗಿದೆ.

ಕೊರೊನಾದ ನಡುವೆ ಇಂದು ಸಂಜೆ ಸುರಿದ ಮಳೆಯಿಂದ ಬೆಂಗಳೂರಿನ ಜನ ತತ್ತರಗೊಂಡಿದ್ದಾರೆ. ಇನ್ನೂ ಮೂರು ದಿನ ಮಳೆ ಇದೇ ರೀತಿ ಮುಂದುವರೆಯಲಿದೆ. ಸಂಜೆ ಮೇಲೆ ಮನೆಯಲ್ಲೇ ಇರಿ ಅಂತಾ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *