– ಪಿಕ್ ಆಪ್ ಪಾಯಿಂಟ್‍ಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಲು ಅವಕಾಶ
ಬೆಂಗಳೂರಿಗೆ: ರಾಜ್ಯ ಸರ್ಕಾರ ಲಾಕ್‍ಡೌನ್ 4.0ನಲ್ಲಿ ಜನರಿಗೆ ಮತ್ತಷ್ಟು ವಿನಾಯ್ತಿಗಳನ್ನು ನೀಡಿ ನಾಳೆಯಿಂದ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ನಾಳೆ ಬೆಂಗಳೂರಿನಿಂದ ರಾಜ್ಯದ 5 ಜಿಲ್ಲೆಗಳ ಮಾರ್ಗದಲ್ಲಿ ಮಾತ್ರ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದಾಗಿ ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಎಸ್‌ಆರ್‌ಟಿಸಿ ನಿಗಮದ ಸಾರಿಗೆಗಳ ಕಾರ್ಯಾಚರಣೆಯನ್ನು ಮೇ 19ರಿಂದ ಪುನರಾಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಟ್ಟು 14 ನಿಯಮಗಳನ್ನು ಕೆಎಸ್‌ಆರ್‌ಟಿಸಿ ರೂಪಿಸಿಕೊಂಡಿದೆ. ಮೊದಲಿಗೆ ಸುಮಾರು 1,500 ಬಸ್‍ಗಳ್ನು (ಶೇ.25 ರಷ್ಟು) ರಸ್ತೆಗಳಿಸಲು ಸರ್ಕಾರದ ಆದೇಶದಲ್ಲಿ ಅವಕಾಶ ನೀಡಲಾಗಿದೆ. ತದನಂತರ ಹಂತ ಹಂತವಾಗಿ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಿ ಕಾರ್ಯಾಚರಣೆಗೊಳಿಸಲಾಗುವುದು ಎಂದು ತಿಳಿಸಿದೆ.
ದರ ಹೆಚ್ಚಳವಿಲ್ಲ: ಬಸ್‍ಗಳಲ್ಲಿ ನಿಗದಿತ ಸೀಟ್‍ಗಳ ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಬಸ್ ಪ್ರಯಾಣ ದರಗಳಲ್ಲಿ ಹೆಚ್ಚಳವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಹಗಲು ವೇಳೆಯಲ್ಲಿ ಅಂದರೆ ಬೆಳಗ್ಗೆ 7 ರಿಂದ ಸಂಜೆ 7ರ ವರೆಗೆ ಮಾತ್ರ ಬಸ್ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ.
5 ಜಿಲ್ಲೆಗಳಿಗೆ ಮಾತ್ರ ಬಸ್: ಬೆಳಗ್ಗೆ 7 ಗಂಟೆಗೆ ಬಸ್ ಪ್ರಯಾಣ ಆರಂಭವಾದರೆ ಸಂಜೆ 7 ಗಂಟೆ ವೇಳೆಗೆ ಗಮ್ಯ ಸ್ಥಳಗಳನ್ನು ತಲುಪುವ ಮಾರ್ಗಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರ ಅನ್ವಯ ಬೆಂಗಳೂರಿನ ಮೆಜೆಸ್ಟಿಕ್ ನಿಂದ ಮೈಸೂರು, ಶಿವಮೊಗ್ಗ, ದಾವರಣಗೆರೆ, ಹಾಸನ, ಮಂಗಳೂರು ಜಿಲ್ಲೆಗಳಿಗೆ ಮಾತ್ರ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಸಂಜೆ 4ಗಂಟೆ, ಶಿವಮೊಗಕ್ಕೆ ಮಧ್ಯಾಹ್ನ 12 ಗಂಟೆ, ದಾವಣಗೆರೆಗೆ ಮಧ್ಯಾಹ್ನ 1 ಗಂಟೆ, ಹಾಸನಕ್ಕೆ 3.30 ಗಂಟೆಗೆ ಹಾಗೂ ಮಂಗಳೂರಿಗೆ ಬೆಳಗ್ಗೆ 11.30 ಗಂಟೆಗೆ ಅಂತಿಮ ಬಸ್ ನಿರ್ಗಮಿಸುತ್ತದೆ. ಮೈಸೂರು, ಮಡಿಕೇರಿ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಎಂದಿನಂತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸಂಚರಿಸುತ್ತವೆ.
ನಿಲುಗಡೆ ಇಲ್ಲ: ಪಿಕ್ ಆಪ್ ಪಾಯಿಂಟ್ ಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಲು ಅವಕಾಶ ನೀಡಲಾಗಿದೆ. ಉಳಿದ ಬಸ್ ನಿಲ್ದಾಣಗಳಲ್ಲಿ ಬಸ್ ನಿಲುಗಡೆ ಇರುವುದಿಲ್ಲ. ರಾಜ್ಯ ಸರ್ಕಾರ ಗುರುತಿಸಿರುವ ಕಂಟೈನ್‍ಮೆಂಟ್ ಝೋನ್‍ಗಳಿಗೆ ಯಾವುದೇ ಬಸ್ ಸಂಚಾರ ಇಲ್ಲ. ಪ್ರತಿ ಭಾನುವಾರ ಯಾವುದೇ ಬಸ್‍ಗಳ ಕಾರ್ಯಾಚರಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೇ ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಬಸ್ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಆದ ಬಳಿಕವೇ ಬಸ್ ಹತ್ತಲು ಅವಕಾಶ ನೀಡಲಾಗುತ್ತದೆ.
ಅಂತರ ರಾಜ್ಯ, ಹವಾನಿಯಂತ್ರಿತ ಬಸ್ಸುಗಳ ಕಾರ್ಯಾಚರಣೆಗೆ ಅವಕಾಶ ನೀಡಿಲ್ಲ. ಮುಂಗಡ ಆಸನಗಳನ್ನು ಕೆಎಸ್‌ಆರ್‌ಟಿಸಿ ವೆಬ್‍ಸೈಟ್ ಮುಖಾಂತರ ಕಾಯ್ದಿರಿಸಿಕೊಳ್ಳಬಹುದಾಗಿದೆ. ಅಲ್ಲದೇ ಪ್ರಯಾಣಿಕರಿಗೆ ಕಡಿಮೆ ಲಗ್ಗೇಜ್ ಹಾಗೂ ಐಡಿ ಕಾರ್ಡ್ ತರುವಂತೆ ಸೂಚನೆ ನೀಡಿದೆ. ಅಲ್ಲದೇ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮಾರ್ಗ ಮಧ್ಯ ಯಾವುದೇ ಸ್ಥಳದಲ್ಲಿ ನಿಲುಗಡೆ ಇಲ್ಲದೇ ಇರುವುದರಿಂದ ನೀರು, ಅಗತ್ಯ ಆಹಾರವನ್ನು ತರಲು ಮನವಿ ಮಾಡಿದೆ.
ಬುಕ್ಕಿಂಗ್ ಆರಂಭ: ಬೆಂಗಳೂರು-ಶಿವಮೊಗ್ಗ, ಶಿವಮೊಗ್ಗ-ಬೆಂಗಳೂರು, ಬೆಂಗಳೂರು-ಚಿಕ್ಕಮಗಳೂರು, ಚಿಕ್ಕಮಗಳೂರು-ಬೆಂಗಳೂರು, ಬೆಂಗಳೂರು-ದಾವಣಗೆರೆ, ದಾವಣಗೆರೆ-ಬೆಂಗಳೂರು, ಬೆಂಗಳೂರು- ಮೈಸೂರು, ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಬೆಂಗಳೂರು, ಬೆಂಗಳೂರು-ಮಂಗಳೂರು, ಮಂಗಳೂರು-ಬೆಂಗಳೂರು, ಬೆಂಗಳೂರು-ಕುಂದಾಪುರ, ಕುಂದಾಪುರ-ಬೆಂಗಳೂರು, ಬೆಂಗಳೂರು-ಹೊಸಪೇಟೆ, ಹೊಸಪೇಟೆ-ಬೆಂಗಳೂರು, ಬೆಂಗಳೂರು-ಬಳ್ಳಾರಿ, ಬಳ್ಳಾರಿ- ಬೆಂಗಳೂರು, ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಸಿರ್ಸಿ, ಬೆಂಗಳೂರು-ರಾಯಚೂರು, ಬೆಂಗಳೂರು-ಬೆಳಗಾವಿ, ಬೆಂಗಳೂರು-ಧಾರವಾಡ.
ಪ್ರಯಾಣಿಕರು ಕೆ ಎಸ್ ಆರ್ ಟಿ ಸಿ, ವೆಬ್‌ಸೈಟ್ www.ksrtc.inಮೂಲಕ ಅಥವಾ ಫ್ರಾಂಚೈಸಿ ಕೌಂಟರುಗಳು / ನಿಗಮದ ಟಿಕೇಟು ಕೌಂಟರುಗಳ ಮೂಲಕ ಟಿಕೇಟುಗಳನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾಲ್ ಸೆಂಟರ್ ನಂಬರ್ ಗೆ ಸಂಪರ್ಕಿಸಿ : 94495 96666