ಬೆಂಗಳೂರಿನಲ್ಲಿ ಮನೆ ಪಕ್ಕದಲ್ಲೇ ಕೋವಿಡ್‌ ಕೇರ್; ಓಯೋ ಆರೈಕೆ ಕೇಂದ್ರ ಉದ್ಘಾಟಿಸಿದ ಡಿಸಿಎಂ

Public TV
2 Min Read

ಗಿವ್‌ ಇಂಡಿಯಾ, ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್‌ ಫಾರ್‌ ಯು ಸಹಯೋಗ

ಬೆಂಗಳೂರು: ನಗರದ ತಮ್ಮ ಮನೆಯ ಅಕ್ಕಪಕ್ಕದಲ್ಲೇ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಹೋಟೆಲ್ ನಲ್ಲಿ  ಆರಂಭಿಸಲಾಗಿರುವ ʼಓಯೋ ಕೋವಿಡ್‌ ಕೇರ್‌ ಸೆಂಟರ್‌ʼಗೆ ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಮಂಗಳವಾರ  ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಡಿಸಿಎಂ ಅವರು, “ಗಿವ್‌ ಇಂಡಿಯಾ, ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್‌ ಫಾರ್‌ ಯುವರ್ಸ್‌ ಮತ್ತು ಒಯೋ ಹೋಟೆಲ್ಸ್‌ನವರು ಸೇರಿ ಸಂಯುಕ್ತವಾಗಿ ಮಾಡಿರುವ ಈ ವ್ಯವಸ್ಥೆಯೂ ಪ್ರಾಯೋಗಿಕವಾಗಿ ನಗರದ ಕಲ್ಯಾಣನಗರದಲ್ಲಿ ಆರಂಭವಾಗಿದ್ದು, ಇದು ಯಶಸ್ವಿಯಾದರೆ ಓಯೋ ಹೋಟೆಲ್ಸ್‌ನವರ ಜತೆ ಒಡಂಬಡಿಕೆ ಮಾಡಿಕೊಂಡು ಅವರು ಎಲ್ಲೆಲ್ಲಿ ಹೋಟೆಲ್‌ ಚೈನ್‌ ಹೊಂದಿದ್ದಾರೆಯೋ ಅಲ್ಲೆಲ್ಲ ಕೋವಿಡ್‌ ಕೇಂದ್ರಗಳನ್ನು ತೆರೆಯಲಾಗುವುದು. ಗ್ರಾಮೀಣ ಭಾಗದ ಹೋಟೆಲ್ ಗಳಲ್ಲಿ ಯೂ ಈ ರೀತಿಯ ಕೇಂದ್ರಗಳನ್ನು ತೆರೆಯಲಾಗುವುದು” ಎಂದರು.

 

ಹೋಟೆಲ್ ಅನ್ನು ಓಯೋನವರು ಕೊಟ್ಟರೆ, ಕೋವಿಡ್‌ ಕೇರ್‌ಗೆ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಗಿವ್‌ ಇಂಡಿಯಾ ಒದಗಿಸುತ್ತದೆ. ಉಳಿದಂತೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಅಜೀಂ ಪ್ರೇಂ ಜೀ ಪ್ರತಿಷ್ಠಾನದ ಡಾಕ್ಸರ್ಸ್‌ ಫಾರ್‌ ಯು ಒದಗಿಸುತ್ತದೆ. ಒಂದು ಖಾಸಗಿ ವ್ಯವಸ್ಥೆ ಅದೆಷ್ಟು ಪರಿಣಾಮಕಾರಿಯಾಗಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಡಾ.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಯಕ್ಕೆ ಕಲ್ಯಾಣನಗರದ  ಕೋವಿಡ್‌ ಕೇರ್‌ನಲ್ಲಿ 20 ಬೆಡ್‌ಗಳಿದ್ದು, ಅಕ್ಕಪಕ್ಕದಲ್ಲಿ ಯಾರಾದರೂ ಸೋಂಕಿತರಿದ್ದರೆ ಇಲ್ಲಿ ಬಂದು ಚಿಕಿತ್ಸೆ ಪಡೆಯಬಹುದು. ಇದು ಒಂದು ರೀತಿ ಹೋಮ್ ಹೈಸೋಲೇಷನ್ ರೀತಿ ಇರುತ್ತದೆ. ಇಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ, ಆರೈಕೆ ಹಾಗೂ ಊಟೋಪಚಾರವೂ ಇರುತ್ತದೆ. ಕೊಠಡಿಗಳು ಸ್ಟಾರ್ ಹೋಟೆಲ್ ಕೊಠಡಿಗಳ ಹಾಗೆ ಇವೆ. ಅಕ್ಸಿಜನ್‌ ಒದಗಿಸಲು ಆಮ್ಲಜನಕ ಸಾಂದ್ರಕಗಳ ಸೌಲಭ್ಯ ಕೂಡ ಇದೆ ಎಂದು ಅವರು‌ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು, ಗಿವ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ವಿನೋದ್‌, ಸರ್ಕಾರಕ್ಕೆ ಸಿಎಸ್ ಆರ್ ನಿಧಿ ಬಗ್ಗೆ ಸಲಹೆ‌  ನೀಡುವ‌ ಕೆ.ವಿ.ಮಹೇಶ, ಡಾಕ್ಟರ್ಸ್ ಫಾರ್ ಯು ಸಂಸ್ಥೆಯ ಆರೋಗ್ಯ ಮತ್ತು ಪೌಷ್ಟಿಕ ವಿಭಾಗದ ನಿರ್ದೇಶಕಿ ಡಾ.ವೈಶಾಲಿ ವೇಣು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *