ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್‌

Public TV
2 Min Read

– 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಆಫೀಸ್‌
– ಭಾರತದಲ್ಲಿ ಉತ್ಪಾದನಾ ಘಟಕ ಆರಂಭ

ಬೆಂಗಳೂರು: ಕೋವಿಡ್‌ 19 ನಂತರ ವಿಶ್ವದ ಯಾವ ದೇಶದಲ್ಲಿ ವಿದೇಶಿ ಹೂಡಿಕೆ ಜಾಸ್ತಿಯಾಗಲಿದೆ ಎಂಬ ಪ್ರಶ್ನೆಗೆ ಹಲವು ತಜ್ಞರು ನೀಡುವ ಉತ್ತರ ಭಾರತ. ಈ ಉತ್ತರಕ್ಕೆ ಪೂರಕ ಎಂಬಂತೆ ಈಗಾಗಲೇ ಗೂಗಲ್‌, ಫೇಸ್‌ಬುಕ್‌ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಿವೆ. ಈಗ ಐಫೋನ್‌ ತಯಾರಿಸುತ್ತಿರುವ ಆಪಲ್‌ ಕಂಪನಿ ಸಹ ಹೂಡಿಕೆ ಮಾಡಲು ಮುಂದಾಗಿದೆ. ಅದರಲ್ಲೂ ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲು ಆಪಲ್‌ ಮುಂದಾಗಿದೆ.

ಹೌದು. ಆಪಲ್‌ ಕಂಪನಿ 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ತೆರೆಯಲು ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ತನ್ನ ರಿಟೇಲ್‌ ವ್ಯವಹಾರವನ್ನು ವಿಸ್ತರಿಸುವ ಸಂಬಂಧ ಕಚೇರಿ ತೆರೆಯುವ ಯೋಜನೆಯನ್ನು ಆಪಲ್‌ ಹಾಕಿಕೊಂಡಿದೆ.

ಕಚೇರಿ ತೆರೆಯುವ ಸಂಬಂಧ ಮಾತುಕತೆ ಆರಂಭಗೊಂಡಿದ್ದು ಶೀಘ್ರವೇ ಅಂತಿಮವಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಪ್ರಿಸ್ಟೇಜ್‌ ಮಿನ್ಸ್ಕ್ ಸ್ಕ್ಯಾರ್‌ನಲ್ಲಿ ಆಪಲ್‌ ಕಚೇರಿ ಆರಂಭಗೊಳ್ಳುವ ನಿರೀಕ್ಷೆಯಿದೆ.

ರಿಟೇಲ್‌ ವ್ಯವಹಾರದ ಜೊತೆಗೆ ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಆಪಲ್‌ ಮುಂದಾಗುತ್ತಿದೆ. ಆಪಲ್‌ ಕಂಪನಿಯ ಉನ್ನತ ದರ್ಜೆಯ ಐಫೋನ್‌ಗಳ ಜೋಡಣೆ ಕೆಲಸ ಚೆನ್ನೈನ ಫಾಕ್ಸ್‌ಕಾನ್‌ ಘಟಕದಲ್ಲಿ ಕಳೆದ ತಿಂಗಳಿನಿಂದ ಆರಂಭಗೊಂಡಿದೆ.

ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆಪಲ್‌ ಶೇ.1ರಷ್ಟು ಪಾಲನ್ನು ಹೊಂದಿದೆ. ಆಪಲ್ ಉತ್ಪನ್ನಗಳು ವಿದೇಶದಿಂದ ಆಮದು ಆಗುತ್ತಿದ್ದು, ಆಮದು ಸುಂಕ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಐಫೋನ್ ಸೇರಿದಂತೆ ಇತರ ಉತ್ಪನ್ನಗಳ ಬೆಲೆ ಜಾಸ್ತಿಯಿದೆ. ಭಾರತದಲ್ಲಿ ಉತ್ಪಾದಿಸಿದರೆ ಆಮದು ಸುಂಕವೇ ಇರದ ಕಾರಣ ಐಫೋನ್ ಬೆಲೆ ಕಡಿಮೆಯಾಗಿ ಮಾರುಕಟ್ಟೆ ವಿಸ್ತರಣೆಯಾಗಬಹುದು ಎಂಬ ಲೆಕ್ಕಾಚಾರವನ್ನು ಆಪಲ್‌ ಹಾಕಿಕೊಂಡಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

ಈಗಾಗಲೇ ಆಪಲ್‌ ಕಂಪನಿ ತೈವಾನ್‌‌ ಮೂಲದ ವಿಸ್ಟ್ರಾನ್ ಕಂಪನಿಯ ಮೂಲಕ ಬೆಂಗಳೂರಿನಲ್ಲಿ ಘಟಕವನ್ನು ಸ್ಥಾಪಿಸಿದೆ. 2017ರಲ್ಲಿ ಆರಂಭಗೊಂಡ ಈ ಘಟಕದಲ್ಲಿ ಐಫೋನ್‌ 6 ಎಸ್‌, 7 ಫೋನ್‌‌ಗಳ ಜೋಡಣೆಯಾಗುತ್ತಿದೆ. ಅಷ್ಟೇ ಅಲ್ಲದೇ ಐಫೋನ್ ಒಳಗಡೆ ಇರುವ ಪ್ರಿಂಟೆಡ್‌ ಸರ್ಕ್ಯೂಟ್ ಬೋರ್ಡ್ಸ್‌ಗಳನ್ನು ಜೋಡಣೆ ಮಾಡಲು ಮುಂದಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *