ಬೆಂಗಳೂರು: ಶಾಂತವಾಗಿದ್ದ ಬೆಂಗಳೂರಿನಲ್ಲಿ ಮತ್ತೆ ಹೆಮ್ಮಾರಿ ಕೊರೊನಾ ನಡುಕ ಹುಟ್ಟಿಸುತ್ತಿದೆ. ಕೇರಳ, ಮಹಾರಾಷ್ಟ್ರ ಬಸ್ ಸಂಚಾರದಿಂದ ಹೊಸ ಟೆನ್ಶನ್ ಶುರುವಾಗಿದ್ದು, ರಾಜಧಾನಿಗೆ ಅಪಾಯದ ಮುನ್ಸೂಚನೆ ಕಾಣಿಸುತ್ತಿದೆ.
ಬೆಂಗಳೂರಿನಲ್ಲಿ ಕೆಲ ತಿಂಗಳಿನಿಂದ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡು, ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈಗ ಎರಡನೇ ಅಲೆಯ ಭೀತಿ ಜನರನ್ನು ದಂಗು ಬಡಿಸಿದೆ. ಕೇರಳ, ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದವರಿಂದಲೇ ಆಪತ್ತಿನ ಮುನ್ಸೂಚನೆ ಕಂಡು ಬರುತ್ತಿದೆ. ಕೇರಳ, ಮಹಾರಾಷ್ಟ್ರದಿಂದ ಬರುವ ಯಾವ ಪ್ರಯಾಣಿಕರ ಬಳಿಯೂ ಕೋವಿಡ್ ನೆಗಟಿವ್ ರಿಪೋಟ್9 ಇಲ್ಲ. ರಾಜ್ಯಕ್ಕೆ ಪ್ರವೇಶಿಸಬೇಕಾದರೆ ಕಡ್ಡಾಯ ಕೊರೊನಾ ಟೆಸ್ಟ್ ಆಗಬೇಕು ಎಂಬ ಸರ್ಕಾರದ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಆದರೂ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸರ್ಕಾರದ ಈ ನಿರ್ಲಕ್ಷ್ಯವೇ ಕೊರೊನಾ ಮಹಾ ಸ್ಫೋಟ ಆಗುವುದಕ್ಕೆ ಅವಕಾಶ ಕೊಡುವಂತಿದೆ.
ಕಳೆದ 10 ದಿನಗಳಿಂದ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಎರಡನೇ ಅಲೆಯ ಆತಂಕ ಸೃಷ್ಟಿಸಿದೆ. ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಕಡ್ಡಾಯವೆಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಸರ್ಕಾರದ ಯಾವ ನಿಯಮಗಳು ಕೂಡ ಪಾಲನೆಯಾಗುತ್ತಿಲ್ಲ.
ಭಾರೀ ಸಂಖ್ಯೆಯಲ್ಲಿ ಕೇರಳ, ಮಹಾರಾಷ್ಟ್ರದಿಂದ ಸರ್ಕಾರಿ, ಖಾಸಗಿ ಬಸ್‍ಗಳ ಮೂಲಕವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರಿಗೆ ಬಂದಿಳಿದರಿಗೆ ತಕ್ಷಣಕ್ಕೆ ಕೋವಿಡ್ ಟೆಸ್ಟ್ ಮಾಡುವ ಕೆಲಸ ಬಿಬಿಎಂಪಿಯಿಂದ ಆಗುತ್ತಿಲ್ಲ. ಕೇರಳದಿಂದ ಹಲವು ಬಸ್ ಗಳು ಬೆಳಗಿನ ಜಾವ 4 ಗಂಟೆಯಿಂದಲೇ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬರುತ್ತಿವೆ. ಆದರೆ ಯಾವ ಪ್ರಯಾಣಿಕರ ಬಳಿಯೂ ಕೋವಿಡ್ ರಿಪೋಟ್9 ಇಲ್ಲ. ಇಂತಹವರನ್ನು ತಕ್ಷಣಕ್ಕೆ ಟೆಸ್ಟ್ ಮಾಡದೇ, ಎಲ್ಲಾ ಪ್ರಯಾಣಿಕರು ಇಲ್ಲಿಂದ ಹೋದ ಮೇಲೆ, ಬೆಳಗ್ಗೆ 10 ಘಂಟೆಗೆ ಕಾಟಚಾರಕ್ಕೆ ಸ್ಥಳಕ್ಕೆ ಬಂದು ಟೆಸ್ಟ್ ಮಾಡಲಾಗುತ್ತಿದೆ.
ರೈಲು ಮೂಲಕವೂ ನಿತ್ಯ ನೂರಾರು ಜನ ನಗರಕ್ಕೆ ಬರುತ್ತಿದ್ದಾರೆ. ಇಂತವರಿಗೆ ಟೆಸ್ಟ್ ಮಾಡುವುದಕ್ಕೆ ಹೆಲ್ತ್ ವಾರಿಯಸ್9 ಕ್ಯಾಂಪ್ ಹಾಕಿಕೊಂಡು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಟೆಸ್ಟ್ ಮಾಡಿಸಿಕೊಳ್ಳದೇ ಕೇರಳ, ಮಹಾರಾಷ್ಟ್ರಿಗರು ಎಸ್ಕೇಪ್ ಆಗುತ್ತಿದ್ದಾರೆ.
ಮಹಾರಾಷ್ಟ್ರದಿಂದ ಬರುವ ಬಸ್‍ಗಳಲ್ಲೂ ಇದೇ ಪರಿಸ್ಥಿತಿಯಿದೆ. ಗಡಿಗಳಲ್ಲಿಯೂ ಟೆಸ್ಟಿಂಗ್ ಆಗುತ್ತಿಲ್ಲ. ಬೆಂಗಳೂರಿನಲ್ಲಿಯೂ ಟೆಸ್ಟ್ ಆಗುತ್ತಿಲ್ಲ. ಬೆಂಗಳೂರಿನ ತುಂಬೆಲ್ಲಾ ಈ ಅಂತರ್ ರಾಜ್ಯ ಪ್ರಯಾಣಿಕರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಬಿಗಿಯಾದ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದೆ. ಈ ನಿರ್ಲಕ್ಷ್ಯವೇ ಮುಂದಿನ ದಿನಗಳಲ್ಲಿ ಅಪಾಯ ಉಂಟು ಮಾಡುವ ಸಾಧ್ಯತೆ ಹೆಚ್ಚಿದೆ.