ಬೆಂಗಳೂರು: ನಗರದಲ್ಲಿ ಪ್ರತಿನಿತ್ಯ ಒಂದು ಸಾವಿರದ ಆಸುಪಾಸಿನಲ್ಲಿ ಕೋವಿಡ್ ಸೋಂಕಿತರು ದೃಢಪಡುತ್ತಿದ್ದಾರೆ. ಬಿಬಿಎಂಪಿಗೆ ಸದ್ಯ ಸೋಂಕಿತರ ಪ್ರಕರಣಕ್ಕಿಂತಲೂ ಸಕ್ರಿಯ ಪ್ರಕರಣಗಳ ಬಗ್ಗೆ ತಲೆನೋವು ಶುರುವಾಗಿದೆ. ನಗರದ ಪಾಸಿಟಿವಿಟಿ ಪ್ರಮಾಣ ಶೇ.1.56 ಕ್ಕೆ ಇಳಿಕೆಯಾಗಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮಾತ್ರ ಇಳಿಕೆ ಕಾಣುತ್ತಿಲ್ಲ. ಗುರುವಾರದವರೆಗೂ 67,036 ಸಕ್ರಿಯ ಪ್ರಕರಣಗಳು ನಗರದಲ್ಲಿವೆ. ಆದರೆ ಅಸಲಿಯಾಗಿ ಈ ಸಂಖ್ಯೆ 20 ಸಾವಿರದ ಆಸುಪಾಸಿನಲ್ಲಿ ಇರಬೇಕಿದೆ. ಉಳಿದ ನಲ್ವತ್ತು-ನಲ್ವತ್ತೈದು ಸಾವಿರಕ್ಕೂ ಹೆಚ್ಚು ಸೋಂಕಿತರ ಸಂಪರ್ಕ ಸಿಗದೆ, ಬಿಬಿಎಂಪಿಗೆ ಗುಣಮುಖರಾದ ನಿಖರ ಮಾಹಿತಿ ಕೊಡಲಾಗುತ್ತಿಲ್ಲ.
ಈ ಬಗ್ಗೆ ಪಾಲಿಕೆ ಪೊಲೀಸ್ ಇಲಾಖೆಯ ಸಹಾಯ ಪಡೆದು ನಾಪತ್ತೆಯಾಗಿರುವವರ ವಿವರ ಕಲೆಹಾಕಲು ಪ್ರಯತ್ನಿಸುತ್ತಿದೆ. ಆದರೆ ನಾಗರಿಕರು ಟೆಸ್ಟಿಂಗ್ ವೇಳೆ ತಪ್ಪು ವಿಳಾಸ, ಫೋನ್ ನಂಬರ್ ನೀಡಿರುವುದರಿಂದ ಅವರ ವಿವರಗಳು ಸರಿಯಾಗಿ ಸಿಗುತ್ತಿಲ್ಲ. ಹೆಚ್ಚಿನವರು ಹೋಂ ಐಸೋಲೇಷನ್ ನಲ್ಲಿರುವುದರಿಂದಲೂ ಗುಣಮುಖ ಆದ ಬಗ್ಗೆ ವಿವರ ಸಿಗದ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗದೆ ಇನ್ನೂ ಹೆಚ್ಚೇ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದ್ದು ಜೂನ್ ಅಂತ್ಯದ ಒಳಗೆ ಸರಿಪಡಿಸುವ ಉದ್ದೇಶ ಹೊಂದಿದೆ.
ಈ ಬಗ್ಗೆ ಪಬ್ಲಿಕ್ ಟಿವಿ ಗೆ ಮಾತನಾಡಿದ ಆರೋಗ್ಯ ವಿಶೇಷ ಆಯುಕ್ತ ಡಿ.ರಂದೀಪ್, ನಮ್ಮ ಅಂದಾಜಿನ ಪ್ರಕಾರ ಸಕ್ರಿಯ ಪ್ರಕರಣಗಳು 20 ಸಾವಿರ ಇರಬೇಕು. ಆದರೆ 40,45 ಸಾವಿರ ಕೇಸುಗಳು ಹೆಚ್ಚು ಇದೆ. ಈ ಪ್ರಕರಣಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಕೆಲವೆಡೆ ಮನೆ ವಿಳಾಸ, ಫೋನ್ ನಂಬರ್ ತಪ್ಪಾಗಿ ಕೊಡಲಾಗಿದೆ. ಇನ್ನು ಕೆಲವೆಡೆ ಫೋನ್ ನಂಬರ್ ಸರಿ ಇದ್ದು ಮನೆ ವಿಳಾಸ ತಪ್ಪಾಗಿ ಕೊಡಲಾಗಿದೆ. ಹೀಗಾಗಿ ಈ ಎಲ್ಲಾ ಫೋನ್ ನಂಬರ್ ಗಳನ್ನು 1912 ಸಾಹಾಯವಾಣಿಗೆ ಕೊಡಲಾಗಿದೆ. ಈ ಪೈಕಿ ಸುಮಾರು 10 ಸಾವಿರ ಪತ್ತೆಹಚ್ಚಿ ಮಾಹಿತಿ ಕೊಟ್ಟಿದ್ದಾರೆ. ಆ ಪ್ರಕಾರ ನಾವು ಡಿಸ್ಚಾರ್ಜ್ ಮಾಡುತ್ತಿದ್ದೇವೆ. ಜೂನ್ 30 ರ ಒಳಗೆ ಎಲ್ಲಾ ಮಾಹಿತಿ ಸಿಗಲಿದೆ. ನಂತರ ಅದನ್ನು ಡಿಸ್ಚಾರ್ಜ್ ಎಂದು ಪರಿಗಣಿಸಲಾಗುವುದು ಎಂದರು.
ಅದಲ್ಲದೆ ಸಾವಿನ ಅಂಕಿ-ಸಂಖ್ಯೆಗಳನ್ನೂ ಪರಿಶೀಲಿಸಲಾಗುತ್ತಿದ್ದು, ಆ ಪೈಕಿ ಇವರ ಮಾಹಿತಿ ಸಿಕ್ಕಿದರೆ ಮೃತಪಟ್ಟಿದ್ದಾರೆ ಎಂದು ತೋರಿಸಲಾಗುವುದು. ಅಥವಾ ಫೋನ್ ಸಂಪರ್ಕಕ್ಕೆ ಸಿಕ್ಕರೆ, ಡಿಸ್ಚಾರ್ಜ್ ಎಂದು ತೋರಿಸಲಾಗುವುದು ಎಂದರು. ಪ್ರತಿನಿತ್ಯ ಒಂದು ಸಾವಿರ ಪಾಸಿಟಿವಿಟಿ ಪ್ರಕರಣ ದೃಢಪಡುತ್ತಿರುವ ಹಿನ್ನೆಲೆ 14 ದಿನ ಕಳೆದಾಗ ಹದಿನಾಲ್ಕು ಸಾವಿರ ಸಕ್ರಿಯ ಪ್ರಕರಣ ಬರಬೇಕಿತ್ತು. ಆದರೆ ಇದು ಹೆಚ್ಚು ತೋರಿಸುತ್ತಿರುವ ಹಿನ್ನಲೆ ಪತ್ತೆಹಚ್ಚಲಾಗುತ್ತಿದೆ. ಇದನ್ನೂಓದಿ: ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ
ಇನ್ನು ಈ ಪೈಕಿ ಎಷ್ಟೋ ಜನ ಬೆಂಗಳೂರು ನಗರದ ಹೊರಗಿನವರಾಗಿದ್ದಾರೆ. ಸಂಪರ್ಕಕ್ಕೆ ಸಿಗದ ಹಿನ್ನೆಲೆ ಬಿಬಿಎಂಪಿ ಇವರನ್ನು ಗುಣಮುಖರಾದವರ ಪಟ್ಟಿಗೂ ಸೇರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅದೇ ಬಿಯು ನಂಬರ್ ವ್ಯಕ್ತಿ ಹೆಚ್ಚು ದಿನಗಳ ಕಾಲ ಆಸ್ಪತ್ರೆಯ ಚಿಕಿತ್ಸೆಯಲ್ಲೇ ಇದ್ದು ನಂತರ ಮೃತಪಟ್ಟರೆ, ಪಾಲಿಕೆಯ ಮಾಹಿತಿ ಸುಳ್ಳಾಗಬಹುದು. ಪೊಲೀಸ್ ಪ್ರಕರಣವೂ ದಾಖಲಾಗುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ದುಡುಕದೆ, ಡೆತ್ ಆಡಿಟ್ ಹಾಗೂ ಫೋನ್ ಮೂಲಕ ಸಂಪರ್ಕಿಸಿ, ಮನೆಗೇ ಭೇಟಿ ನೀಡಿ ಖಚಿತ ಪಡಿಸಿಕೊಂಡು ಮಾಹಿತಿ ನೀಡಲಿದೆ. ಇದನ್ನೂ ಓದಿ: 79ರ ವ್ಯಕ್ತಿಗೆ 305 ದಿನಗಳ ಕಾಲ ಕೊರೊನಾ, 43 ಬಾರಿ ಪಾಸಿಟಿವ್ – ಇದು ವರ್ಲ್ಡ್ ಲಾಂಗೆಸ್ಟ್ ಕೇಸ್