ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ – ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಆರಂಭ

Public TV
2 Min Read

– ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ
– ಆ.23 ರಿಂದ ಶಾಲೆ, ಕಾಲೇಜು ಆರಂಭ

ಬೆಂಗಳೂರು: ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವ ಜೊತೆ ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡದೇ ಇರಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಇನ್ನೊಂದೆಡೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ರಾಜ್ಯದಲ್ಲಿ ಅಷ್ಟೇನು ಪರಿಣಾಮ ಬೀರದ ಕಾರಣ ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಆಗಸ್ಟ್ 23ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಕೊರೊನಾ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಜ್ಞರು ಹಾಗೂ ಸಚಿವರ ಜೊತೆ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ನಿರ್ಧಾರಗಳನ್ನು ತಿಳಿಸಿದರು.

ಕೊರೊನಾ ಪ್ರಕರಣಗಳು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ನಿರ್ಧರಿಸಿದ್ದೇವೆ. ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ರಿಂದ 12ನೇ ತರಗತಿ ವರೆಗೆ ಶಾಲಾ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಒಂದು ವೇಳೆ ಶಾಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದರೆ ಒಂದು ವಾರ ಶಾಲೆ ಬಂದ್ ಮಾಡಬೇಕು, ನಂತರ ತೆರೆಯಬೇಕು. ಜಿಲ್ಲಾವಾರು ಕೋವಿಡ್ ಪ್ಲ್ಯಾನ್ ಕುರಿತು ಚರ್ಚೆ ಮಾಡಲಾಗಿದೆ. ವೈಜ್ಞಾನಿಕವಾದ ಅಂಕಿ ಅಂಶಗಳ ಸಮೇತ, ಅಂತರಾಷ್ಟ್ರೀಯ, ರಾಷ್ಟ್ರೀಯ ಟ್ರೆಂಡ್ ಬಗ್ಗೆ ಕೋವಿಡ್ ಸ್ಥಿತಿಗತಿ ಬಗ್ಗೆ ತಿಳಿಸಿದ್ದಾರೆ. ಕೋವಿಡ್ ನಿರ್ವಹಣೆ ಹೇಗೆ ಅನ್ನೋದು ನಮ್ಮ ಸವಾಲು. ಕೋವಿಡ್ ಎರಡನೇ ಅಲೆ ಕಡಿಮೆ ಆದ ಬಳಿಕವೂ 1600, 1500 ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್ ಮೊದಲ ಅಲೆ ಕಡಿಮೆಯಾದಾಗ 200 ಬರುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ವೀಕೆಂಡ್ ಕರ್ಫ್ಯೂ ಇಲ್ಲ
ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇರುವುದಿಲ್ಲ. ಬೆಂಗಳೂರಿನಲ್ಲಿ ಸಂಪೂರ್ಣ ಅವಲೋಕನ ಮಾಡಲಾಗಿದ್ದು, ಶೇ.0.7ರಷ್ಟು ಪಾಸಿಟಿವಿಟಿ ರೇಟ್ ಇದೆ. ಶೇ.2ರಷ್ಟು ಪಾಸಿಟಿವಿಟಿ ದರ ಬಂದರೆ, ಆಕ್ಸಿಜನ್ ಬೆಡ್ ಶೇ.40ರಷ್ಟು ಬೆಡ್ ಭರ್ತಿ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿಗೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿವರಿಸಿದರು.

ಜಿಲ್ಲಾವಾರು ಕೋವಿಡ್ ಪ್ಲ್ಯಾನ್
ರಾಜ್ಯಾದ್ಯಂತ ಏಕರೂಪ ಪ್ಲ್ಯಾನ್, ನಿಯಮಗಳು ಇರುವುದಿಲ್ಲ. ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ಕೊಡಗು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಲ್ಲಿ ವ್ಯಾಕ್ಸಿನೇಶನ್ ಆಗಬೇಕು, ಟೆಸ್ಟಿಂಗ್ ಜಾಸ್ತಿ ಆಗಬೇಕು. ಪಾಸಿಟಿವಿ ರೇಟ್ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನೇಷನ್ ಹೆಚ್ಚಿಸುವುಬೇಕು. ರಾಯಚೂರು, ಕಲಬುರಗಿ, ಬಿಜಾಪುರ, ತುಮಕೂರು ಜಿಲ್ಲೆಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಲು ನಿರ್ಧಾರಿಸಲಾಗಿದೆ ಎಂದರು.

ಮುಂದಿನ ಮೂರು ವಾರದೊಳಗೆ 6 ಜಿಲ್ಲೆಗಳಲ್ಲಿ ಜಿನೋಮ್ ಟೆಸ್ಟ್ ಲ್ಯಾಬ್ ಸ್ಥಾಪನೆ ಮಾಡಲಾಗುವುದು. ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿಯಲ್ಲಿ ಆರು ಜೀನೋಂ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೆ ನಿರ್ಧರಿಸಲಾಗಿದೆ. ಡೆಲ್ಟಾ ವೇರಿಯಂಟ್ ನ ಬಿಹೇವಿಯರ್ ಅಧ್ಯಯನ ಮಾಡಬೇಕು. ಇದು ಜಿನೋಂ ಟೆಸ್ಟ್ ಮೂಲಕ ಮಾತ್ರ ಸಾಧ್ಯ ಎಂದು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಡಾ.ದೇವಿ ಪ್ರಸಾದ್ ಶೆಟ್ಟಿ, ಡಾ.ಎಂ.ಕೆ.ಸುದರ್ಶನ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ವೈದ್ಯರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *