ಬೆಂಗಳೂರಲ್ಲಿ ತಿರುವನಂತಪುರಂ ಮಾದರಿಯ ಟ್ರಿಪಲ್ ಲಾಕ್‍ಡೌನ್?

Public TV
2 Min Read

– ಸಮುದಾಯಕ್ಕೆ ಸೋಂಕು ಹರಡುವ ಭೀತಿ

ಬೆಂಗಳೂರು: ಮೂಲವೇ ಇಲ್ಲದೆ ರಾಜ್ಯದಲ್ಲಿ ಪ್ರತಿನಿತ್ಯ ನೂರಾರು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳುತ್ತಿದ್ದು, ಸಮುದಾಯಕ್ಕೆ ಸೋಂಕು ಹಬ್ಬುವ ಭೀತಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕೇರಳ ಮಾದರಿಯ ಟ್ರಿಪಲ್ ಲಾಕ್‍ಡೌನ್ ಪದ್ಧತಿಯನ್ನು ಬೆಂಗಳೂರಿನಲ್ಲಿ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಕೇರಳದ ತಿರುವನಂತಪುರಂನಲ್ಲಿ ಮೂಲವೇ ಇಲ್ಲದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಸಮುದಾಯಕ್ಕೆ ಹರಡುವುದನ್ನು ತಡೆಯಲು ಇಂದಿನಿಂದ ಒಂದು ವಾರಗಳ ಕಾಲ ಟ್ರಿಪಲ್ ಲಾಕ್‍ಡೌನ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಟ್ರಿಪಲ್ ಲಾಕ್‍ಡೌನ್ ಮೂಲಕ ಇಡೀ ರಾಜ್ಯದಿಂದ ಬೆಂಗಳೂರನ್ನು ಪ್ರತ್ಯೇಕವಾಗಿರಿಸಿ ಸೋಂಕು ನಿಯಂತ್ರಣಕ್ಕೆ ತರುವ ಬಗ್ಗೆ ಚಿಂತನೆಗಳು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಟ್ರಿಪಲ್ ಲಾಕ್ ಮಾಡೆಲ್?
ಲಾಕ್‍ಡೌನ್ 1: ತಿರುವನಂತಪುರಂಗೆ ಸಂಪರ್ಕಿಸುವ ಎಲ್ಲ ರಸ್ತೆಗಳು ಬಂದ್ ಮಾಡುವುದು, ಎಲ್ಲ ಜಿಲ್ಲೆಗಳಿಂದ ಸಂಪರ್ಕ ನಿರ್ಬಂಧಿಸುವುದು, ಇಡೀ ನಗರವನ್ನು ಸಂಪೂರ್ಣ ಲಾಕ್‍ಡೌನ್ ಮಾಡುವುದು. ದಿನಸಿ, ಹಾಲು, ತರಕಾರಿ, ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್ ಬಿಟ್ಟು ಎಲ್ಲ ಸರ್ಕಾರಿ, ಖಾಸಿಗಿ ಕಚೇರಿ, ಅಂಗಡಿ ಮುಂಗಟ್ಟುಗಳನ್ನು ಕಟ್ಟುನಿಟ್ಟಾಗಿ ಬಂದ್ ಮಾಡುವುದು. ತುರ್ತು ಪರಿಸ್ಥಿತಿಗಾಗಿ ಒಂದೊಂದು ಆಗಮನ, ನಿರ್ಗಮನ ರಸ್ತೆಗಳು ಮಾತ್ರ ತೆರೆದಿಡುವುದು. ಈ ಮೂಲಕ ಸೋಂಕಿನ ಚೈನ್ ಲಿಂಕ್ ಕಟ್ ಮಾಡಿ ಸಮುದಾಯಕ್ಕೆ ಹಬ್ಬುವುದನ್ನು ತಡೆಯುವುದು.

ಲಾಕ್‍ಡೌನ್ 2: ಕಂಟೈನ್ಮೆಂಟ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವುದು. ಒಂದು ವಾರ ಜನರು ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡುವುದು. ಈ ಪ್ರದೇಶದಲ್ಲಿ ಜನ ಸಂಚಾರ ಸಂಪೂರ್ಣ ನಿರ್ಬಂಧಿಸುವುದು.

ಲಾಕ್‍ಡೌನ್ 3: ಸೋಂಕಿತ ವ್ಯಕ್ತಿ ಅಥಾವ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿರುವ ವ್ಯಕ್ತಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇಡುವುದು. ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು. ಅವರಿಂದ ಸೋಂಕು ಹರಡದಂತೆ ಎಚ್ಚರ ವಹಿಸುವುದು.

ಈ ಪ್ರಯೋಗ ಇಂದಿನಿಂದ ತಿರುವನಂತಪುರಂ ನಲ್ಲಿ ಆರಂಭವಾಗಿದ್ದು, ಒಂದು ವಾರಗಳ ಬಳಿಕ ಇದರ ಪರಿಣಾಮ ತಿಳಿಯಲಿದೆ. ಇದನ್ನು ಮಾದರಿಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಟ್ರಿಪಲ್ ಲಾಕ್‍ಡೌನ್ ಜಾರಿ ಮಾಡುವ ಬಗ್ಗೆ ಸರ್ಕಾರ ಆಸಕ್ತಿ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *