ಬೆಂಗಳೂರಲ್ಲಿ ಕೊರೊನಾ ಪ್ರತಿ ದಿನದ ದಾಖಲೆಯೂ ಪುಡಿಪುಡಿ

Public TV
2 Min Read

-2 ಸಾವಿರದಂಚಿಗೆ ಬಂದು ನಿಂತ ಮಹಾಮಾರಿ
-25 ಪೊಲೀಸ್ ಸ್ಟೇಷನ್ ಸೀಲ್‍ಡೌನ್

ಬೆಂಗಳೂರು: ಕೊರೊನಾ ಮಹಾ ಸುನಾಮಿ ರಾಜ್ಯದ ಮೇಲೆ ಕಳೆದೊಂದು ವಾರದಿಂದ ನಿರಂತರವಾಗಿ ದೊಡ್ಡ ದಾಳಿ ಮಾಡುತ್ತಿದೆ. ಡೆಡ್ಲಿ ವೈರಸ್ ಪ್ರತಿ ದಿನವೂ ತನ್ನೆಲ್ಲಾ ಹಿಂದಿನ ದಾಖಲೆಗಳನ್ನು ಪುಡಿಗಟ್ಟಿ ಹೊಸ ಇತಿಹಾಸ ಬರೆಯುತ್ತಿದೆ. ನೋಡ ನೋಡುತ್ತಲೇ ಸೋಂಕಿತರ ಸಂಖ್ಯೆ 23,474ಕ್ಕೆ ಬಂದು ನಿಂತಿದೆ. ಇಂದು ಒಂದೇ ದಿನ 1,925 ಮಂದಿಯನ್ನ ಹೆಮ್ಮಾರಿ ವಕ್ಕರಿಸಿಕೊಂಡಿದೆ. ಬೆಂಗಳೂರಿನ ಅಂಕಿ ಅಂಶಗಳಂತೂ ಮಹಾನಗರವನ್ನ ಬಿಟ್ಟು ಹೋಗುವಂತೆ ಮಾಡಿದೆ.

ಇಂದು ರಾಜಧಾನಿ ಬೆಂಗಳೂರಲ್ಲಿ ಹೊಸದಾಗಿ 1235 ಜನರ ಮೇಲೆ ಸೋಂಕು ಸವಾರಿ ಮಾಡಿದೆ. ಪರಿಣಾಮ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 9,580ಕ್ಕೆ ಬಂದು ನಿಂತಿದೆ. ರಾಜ್ಯದ ಒಟ್ಟು ಸೋಂಕಿತರ ಪೈಕಿ ಬೆಂಗಳೂರಿನದ್ದೇ ದೊಡ್ಡ ಪಾಲಿದೆ. ಬೆಂಗಳೂರಿನ ಸ್ಥಿತಿ ಕ್ಷಣಕ್ಷಣಕ್ಕೂ ಭಯ ಬೀಳಿಸುತ್ತಿದೆ. ಕಾರಣ ಸೋಂಕಿತರ ಸಂಖ್ಯೆ ಏರಿದ ವೇಗದಲ್ಲಿ ಬಿಡುಗಡೆ ಹೊಂದುತ್ತಿಲ್ಲ. ಇವತ್ತು ಕೇವಲ 302 ಮಂದಿ ಬಿಡುಗಡೆ ಹೊಂದಿದ್ರೆ, 8167 ಮಂದಿ ಇನ್ನೂ ಬೆಡ್ ಮೇಲೆ ಇದ್ದಾರೆ.

55 ಖಾಕಿಗಳಿಗೆ ಕೊರೊನಾ: ಬೆಂಗಳೂರಿನಲ್ಲಿ 55 ಪೊಲೀಸರಿಗೆ ಕೊರೊನಾ ಸೋಂಕು ಇಂದು ತಗುಲಿರೋದು ದೃಢವಾಗಿದೆ. ಈ ಮೂಲಕ 335 ಪೊಲೀಸರಿಗೆ ಹೆಮ್ಮಾರಿ ಅಂಟಿದೆ. ಐವರು ಸಾವನ್ನಪ್ಪಿದ್ದಾರೆ. 304 ಸಕ್ರಿಯ ಪ್ರಕರಣಗಳಿವೆ. ಇವತ್ತು ಒಂದೇ ದಿನ 25 ಸ್ಟೇಷನ್‍ಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಇಬ್ಬರಿಗೆ ವೈರಸ್ ಅಂಟಿರೋ ಕಾರಣ ಮಲ್ಲೇಶ್ವರಂ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದೆ. ಕೆಜೆ ಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ 5 ಜನರಿಗೆ ಪಾಸಿಟಿವ್ ಆಗಿದೆ. ರಾಜಾಜಿನಗರ ಸಂಚಾರ ಠಾಣೆಗೂ ಕೊರೊನಾ ಎಂಟ್ರಿಯಾಗಿದ್ದು, 70 ಜನ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ತುಮಕೂರಿನ ಕುಣಿಗಲ್ ಠಾಣೆಯ ಹೆಡ್‍ಕಾನ್ಸ್ ಟೇಬಲ್‍ಗೆ ಸೋಂಕು ತಗಲಿದ್ದು, ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಉಡುಪಿಯ ಕುಂದಾಪುರದ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್‍ಗೆ ವೈರಸ್ ಅಂಟಿದ್ದು, ಸೀಲ್‍ಡೌನ್ ಮಾಡಲಾಗಿದೆ. ಈ ಮಧ್ಯೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್ ಮಾಡಲಾಗಿದೆ. ದೇವಸ್ಥಾನದ ಪಕ್ಕದಲ್ಲೇ ಸೋಂಕಿತ ವ್ಯಕ್ತಿಗೆ ಪಾಸಿಟಿವ್ ಬಂದಿರೋ ಕಾರಣ ಸೀಲ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *