ಬುರ್ಜ್ ಖಲೀಫಾ ಮೇಲೆ ಕಿಚ್ಚನ ಕಟೌಟ್- ಖರ್ಚಾಗಿದ್ದೆಷ್ಟು? ಮುಂದೆ ಯಾರದ್ದು ಬರಲಿದೆ?

Public TV
2 Min Read

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸ್ಯಾಂಡಲ್‍ವುಡ್ ನಟರೊಬ್ಬರ ಕಟೌಟ್ ಕಾಣಿಸುವ ಮೂಲಕ ದಾಖಲೆ ನಿರ್ಮಿಸಲಾಗಿದ್ದು, ಅದೂ ಸಹ ಕಿಚ್ಚ ಸುದೀಪ್ ಅವರದ್ದು ಎನ್ನುವುದು ಇನ್ನೂ ವಿಶೇಷ. ಕಿಚ್ಚ ಸುದೀಪ್ ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ವಿಕ್ರಾಂತ್ ರೋಣ ಚಿತ್ರತಂಡ ಬೆಳ್ಳಿ ಹಬ್ಬ ಆಚರಣೆ ಮಾಡುವ ಮೂಲಕ ಅವರಿಗೆ ಗಿಫ್ಟ್ ನೀಡಿದೆ. ಇದರ ಬೆನ್ನಲ್ಲೇ ಇದೀಗ ಈ ಪ್ರಚಾರಕ್ಕೆ ಎಷ್ಟು ಖರ್ಚು ಆಗಿರಬಹದು ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ.

ಹೌದು ಕನ್ನಡ ಬಾವುಟದ ಬಣ್ಣ ಹಾಗೂ ಕಿಚ್ಚ ಕಾಣಿಸುತ್ತಿದ್ದಂತೆ ಕೇವಲ ಅವರ ಅಭಿಮಾನಿಗಳು ಮಾತ್ರವಲ್ಲ, ಇಡೀ ರಾಜ್ಯದ ಜನರೇ ಸಂತಸಗೊಂಡಿದ್ದರು. ರಾಜ್ಯದ ಹೆಮ್ಮೆ ಎಂದು ಸಹ ಕೊಂಡಾಡುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಹೇಗಾಯಿತು? ಬುರ್ಜ್ ಖಲೀಫಾ ಮೇಲೆ ಕಟೌಟ್ ಹಾಕಲು ಖರ್ಚಾಗಿದ್ದೆಷ್ಟು ಎಂಬ ಚರ್ಚೆ ಸಹ ಎದ್ದಿತ್ತು.

ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲಿನ ಈ ಲೇಸರ್ ಪರದೆ ಮೇಲೆ ಮಿಂಚಲು ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕು. ಹೀಗಾಗಿ ಚಿತ್ರ ತಂಡ ದುಬಾರಿ ಪ್ರಚಾರ ಮಾಡಿದೆ ಎಂದು ಇದೀಗ ತಿಳಿದು ಬಂದಿದೆ. ಕಿಚ್ಚನ ದುಬೈ ಸಂಭ್ರಮಕ್ಕೆ ಬರೋಬ್ಬರಿ 3 ಕೋಟಿ ರೂ.ಗೂ ಅಧಿಕ ಹಣ ಖರ್ಚಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಲೇಸರ್ ಪರದೆ ಮೇಲೆ ವಿಡಿಯೋ ಪ್ರಸಾರ ಮಾಡಲು ನಿಮಿಷಕ್ಕೆ ಲಕ್ಷಗಟ್ಟಲೇ ಹಣ ವ್ಯಯಿಸಬೇಕು.

ಬುರ್ಜ್ ಖಲೀಫಾದ ಲೇಸರ್ ಸ್ಕ್ರೀನ್ ಮೇಲೆ ಪ್ರಸಾರವಾಗುವ 3 ನಿಮಿಷ ಅಂದರೆ 180 ಸೆಕೆಂಡ್‍ಗಳ ವಿಡಿಯೋಗೆ 50 ಲಕ್ಷ ರೂ. ನೀಡಬೇಕು. ಇದು ಕನಿಷ್ಟ ದರವಾಗಿದ್ದು, ವೀಕೆಂಡ್‍ಗಳಲ್ಲಿ ಇದರ ದರ 70-80 ಲಕ್ಷ ರೂ. ದಾಟುತ್ತದೆ ಎಂಬ ಮಾಹಿತಿ ಇದೆ. ಲೇಸರ್ ಶೋಗೆ ನಾಲ್ಕು ವಾರ ಮೊದಲೇ ಅರ್ಜಿ ಸಲ್ಲಿಸಬೇಕು. ಜಾಹೀರಾತು ಏಜೆನ್ಸಿ ಮೂಲಕ ಮೊದಲೇ ಪೂರ್ತಿ ಹಣವನ್ನು ಕಟ್ಟಬೇಕು. ಬಳಿಕ ಆಡಳಿತ ಮಂಡಳಿ ನೀಡಿದ ದಿನಾಂಕದಂದು ರಾತ್ರಿ 8ರ ಬಳಿಕ ವಿಡಿಯೋ ಲೇಸರ್ ಪರದೆ ಮೇಲೆ ಪ್ರಸಾರವಾಗುತ್ತದೆ.

 

View this post on Instagram

 

A post shared by KicchaSudeepa (@kichchasudeepa)

ಈ ಮೊದಲು ಬಾಲಿವುಡ್ ನಟ ಶಾರುಖ್ ಖಾನ್ ಹುಟ್ಟುಹಬ್ಬಕ್ಕೂ ಇದೇ ರೀತಿ ಶುಭ ಕೋರಲಾಗಿತ್ತು. ಜಗತ್ತಿನ ಎತ್ತರದ ಕಟ್ಟಡದಲ್ಲಿ ಗೌರವ ಪಡೆದ ಭಾರತದ ಮೊದಲ ನಟ ಎಂದು ಸಹ ಹೇಳಲಾಗಿತ್ತು. ಬಳಿಕ ಶಾರುಖ್ ಖಾನ್ ಅಭಿಮಾನಿಯೊಬ್ಬ ಹಣ ನೀಡಿ ಈ ವಿಡಿಯೋ ಹಾಕಿಸಿದ್ದ ಎಂಬುದು ತಿಳಿದಿತ್ತು. ಹಣ ನೀಡಿದರೆ ಬುರ್ಜ್ ಖಲೀಫಾ ಮೇಲೆ ಯಾರ ಬಗ್ಗೆ ಬೇಕಾದರೂ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ ಎಲ್ಲ ಸಿನಿಮಾಗಳನ್ನು ಪ್ರಚಾರ ಮಾಡಲಾಗುತ್ತದೆ. ಆದರೆ ಈ ಹಿಂದೆ ಮಹಾತ್ಮಾ ಗಾಂಧಿಯವರ 151ನೇ ಜನ್ಮ ದಿನದಂದು ಭಾರತೀಯ ರಾಯಭಾರಿ ಕಚೇರಿಯ ಪ್ರಯತ್ನದ ಫಲವಾಗಿ ಗಾಂಧೀಜಿ ಸಂದೇಶದೊಂದಿಗೆ ತ್ರಿವರ್ಣ ಧ್ವಜವನ್ನು ಬುರ್ಜ್ ಖಲೀಫಾ ಉಚಿತವಾಗಿ ಪ್ರದರ್ಶನ ಮಾಡಿತ್ತು. ಇದನ್ನು ಹೊರತುಪಡಿಸಿದರೆ ಭಾರತದ ಇನ್ನಾವುದೇ ವಿಡಿಯೋಗಳು ಉಚಿತವಾಗಿ ಪ್ರಸಾರವಾಗಿಲ್ಲ ಎಂದು ಹೇಳಲಾಗುತ್ತದೆ. ಇದೀಗ ಕಿಚ್ಚ ಸುದೀಪ್ ಹಾಗೂ ವಿಕ್ರಾಂತ್ ರೋಣ ಸಿನಿಮಾದ ವಿಡಿಯೋವನ್ನು ಸಹ ಹಣ ನೀಡಿ ಹಾಕಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದೆ ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರಕ್ಕೂ ಈ ರೀತಿ ಪ್ರಚಾರ ನೀಡಲಾಗುತ್ತದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *