ಬೀದಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ನೆರವಿಗೆ ನಿಂತ ಕಿಚ್ಚ

Public TV
2 Min Read

ಹುಬ್ಬಳ್ಳಿ: ಮಕ್ಕಳು ಶಾಲೆಗಾಗಿ ಕಣ್ಣೀರು ಹಾಕಿದ್ದರು. ಕಲಿಯಲು ಕಟ್ಟಡವಿಲ್ಲದೆ, ಬೀದಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಅಂತಹ ಮಕ್ಕಳ ಸಂಕಷ್ಟಕ್ಕೆ ಈಗ ಕಿಚ್ಚ ಸುದೀಪ್ ನಿಂತಿದ್ದು, ಈ ಮೂಲಕ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.

ಹುಬ್ಬಳ್ಳಿಯ ರಾಮನಗರದಲ್ಲಿರುವ ಸರ್ಕಾರಿ ಅನುದಾನಿತ ಹರಿಜನ ಹೆಣ್ಣು ಮಕ್ಕಳ ಶಾಲೆಯ ಮಕ್ಕಳು ಕಳೆದೊಂದು ವಾರದಿಂದ ಶಾಲೆಗಾಗಿ ಕಣ್ಣೀರು ಹಾಕಿದ್ದರು. ಬೀದಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಮಕ್ಕಳ ಸಂಕಷ್ಟದ ಕುರಿತು ಮಾಧ್ಯಮದಲ್ಲಿ ವರದಿ ನೋಡಿದ್ದ ಕಿಚ್ಚ ಸುದೀಪ್, ಮಕ್ಕಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಇಂದು ಅಭಿನಯ ಚರ್ಕವರ್ತಿ ತಮ್ಮ ಟ್ರಸ್ಟ್ ಮೂಲಕ ಮಕ್ಕಳ ಕಲಿಕೆಗೆ ಸಹಾಯದ ಹಸ್ತ ಚಾಚಿದ್ದಾರೆ.

ಕಳೆದ ಒಂದು ವಾರದ ಹಿಂದೆ ನಡೆದಿದ್ದ ಘಟನೆಯಿಂದ ಮಕ್ಕಳು ಮುಂದೇನು ಎಂಬ ಯೋಚನೆಗೆ ಸಿಲುಕಿದ್ದರು. ಕೋರ್ಟ್ ನ ಆದೇಶವನ್ನು ಹಿಡಿದು ಬಂದಿದ್ದ ಗಾಂಧಿವಾಡ ಸೊಸೈಟಿ, ಮಕ್ಕಳ ಕಲಿಕೆಯನ್ನು ನೋಡದೆ ಪೀಠೋಪಕರಣಗಳನ್ನು ಹೊರ ಹಾಕಿತ್ತು. ಮಕ್ಕಳು ಎಷ್ಟೇ ಗೋಗರೆದರೂ, ಅವರ ಮಾತನ್ನೂ ಕೇಳದೆ ಮಕ್ಕಳನ್ನು ಹೊರಹಾಕಲಾಗಿತ್ತು. ಆದರೆ ಅಂದು ಮಕ್ಕಳ ಆ ಗೋಳಾಟವನ್ನು ಕಂಡಿದ್ದ ಕೋಟಿಗೊಬ್ಬ ಇದೀಗ ಮಕ್ಕಳ ಸಹಾಯಕ್ಕೆ ಮುಂದಾಗಿದ್ದಾರೆ. ಹುಬ್ಬಳ್ಳಿಯ ಹರಿಜನ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗೆ ನಟ ಸುದೀಪ್ ಕೈಜೋಡಿಸಿದ್ದು, ಅವರ ಸಂಪೂರ್ಣ ಕಲಿಕೆಗೆ ನಾನು ಸದಾ ಸಿದ್ಧ ಎನ್ನುವ ಮೂಲಕ ತಮ್ಮ ಟ್ರಸ್ಟ್ ನ್ನು ಹುಬ್ಬಳ್ಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಇಂದು ರಾಮನಗರಕ್ಕೆ ಸುದೀಪ್ ಟ್ರಸ್ಟ್ ಸದಸ್ಯರು ಬೇಟಿ ನೀಡಿ, ಮಕ್ಕಳ ಪರಿಸ್ಥಿತಿಯನ್ನು ಆಲಿಸಿದರು.

ಮಾತ್ರವಲ್ಲದೆ ಸ್ವತಃ ಕಿಚ್ಚ ಸುದೀಪ್ ವೀಡಿಯೋ ಕಾಲ್ ಮಾಡುವ ಮೂಲಕ ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿ ಜೊತೆ ಮಾತನಾಡಿ ಧೈರ್ಯ ತುಂಬಿದರು. ಮಕ್ಕಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ನೀಡುವುದಾಗಿ ಅವರು ಇದೇ ವೇಳೆ ಭರವಸೆ ನೀಡಿದರು.

ಬಿಸಿಲಿನಲ್ಲಿ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದ್ದು, ಅವರಿಗೆ ಬೇರೆ ಕೊಠಡಿಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಸ್ಥಳೀಯ ಜನರು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿ ಸಂಘದವರು ಸೇರಿ ಸುದೀಪ್ ಟ್ರಸ್ಟ್ ಗೆ ಸದ್ಯದ ಸ್ಥಿತಿಯನ್ನು ಮನವರಿಕೆ ಮಾಡಿದರು. ಇದನ್ನು ಆಲಿಸಿದ ಸುದೀಪ್ ಚಾರಿಟೇಬಲ್ ಟ್ರಸ್ಟ್ ನವರು, ಶಾಲೆಗೆ ಬೇಕಾದ ಎಲ್ಲ ಸಹಾಯ ಮಾಡಲು ನಾವು ಸಿದ್ಧ, ಕಾನೂನು ಮೂಲಕವೂ ಶಾಲೆ ಮರಳಿ ಪಡೆಯುವ ಕಾರ್ಯಕ್ಕೆ ಮುಂದಾದರೆ ಅದಕ್ಕೂ ನಾವು ಬೆಂಬಲ ನೀಡುತ್ತೇವೆ ಎಂದು ಟ್ರಸ್ಟ್ ತಿಳಿಸಿದೆ. ಸಂಕಷ್ಟಕ್ಕೆ ಸ್ಪಂದಿಸಿದ ಸುದೀಪ್ ಗೆ ಶಾಲಾ ಮಕ್ಕಳು ಅಭಿನಂದನೆ ಸಲ್ಲಿಸಿದ್ದಾರೆ.

ಕಿಚ್ಚನ ಈ ಸಹಾಯ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಗಾಂಧಿವಾಡ ಸೊಸೈಟಿ ಮತ್ತು ಸ್ಕೂಲ್ ನ ಈ ಕಾನೂನು ಸಮರಕ್ಕೂ ಸುದೀಪ ಚಾರಿಟೇಬಲ್ ಟ್ರಸ್ಟ್ ಸಪೋರ್ಟ್ ನೀಡಲಿದೆ. ಸದ್ಯ ಮಕ್ಕಳಿಗೆ ಪಾಠ ಕೇಳಲು ಇದೀಗ ಕೊಠಡಿಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಹೊಸ ಕಟ್ಟಡಕ್ಕೆ ಮುಂದಾದರೂ ಕಟ್ಟಿಕೊಡಲಾಗುವುದು ಎಂಬ ಆಶ್ವಾಸನೆಯನ್ನು ಇದೀಗ ಕಿಚ್ಚ ಸುದೀಪ್ ಚಾರಿಟೇಬಲ್ ನೀಡಿದೆ. ಹೀಗಾಗಿ ಮಕ್ಕಳು ಮತ್ತು ಶಿಕ್ಷಕರಲ್ಲಿ ಅಪಾರ ಸಂತಸ ಮನೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *