ಬೀಚ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಕೊಚ್ಚೋಯ್ತು ಕಂದಮ್ಮ

Public TV
1 Min Read

– ಕಣ್ಮುಚ್ಚಿ ತೆರೆಯುವಷ್ಟರಲ್ಲಿ 2.5 ವರ್ಷದ ಕಂದಮ್ಮ ಸಮುದ್ರದ ಪಾಲು

ತಿರುವನಂತಪುರಂ: ಸೆಲ್ಫಿಯಿಂದಾಗಿ ಹಲವು ರೀತಿಯಲ್ಲಿ ಅನಾಹುತಗಳು ಸಂಭವಿಸಿರುವುದನ್ನು ಕಂಡಿದ್ದೇವೆ. ಅದೇ ರೀತಿಯ ಮನಕಲುಕುವ ದುರಂತ ಇದೀಗ ನಡೆದಿದ್ದು, ತಾಯಿ ತನ್ನ ಮೂರು ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಎರಡೂವರೆ ವರ್ಷದ ಕಂದಮ್ಮ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿರುವ ಆಘಾತಕಾರಿ ಘಟನೆ ನಡೆದಿದೆ.

ಕೇರಳದ ಆಲಪ್ಪುಳ ಬೀಚ್ ಬಳಿ ಘಟನೆ ನಡೆದಿದ್ದು, ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಬಾಲಕನನ್ನು ಅಧಿಕೃಷ್ಣ ಎಂದು ಗುರುತಿಸಲಾಗಿದೆ. ಮಗು ಕೇವಲ 2.5 ವರ್ಷದ್ದಾಗಿದೆ. ಅಧಿಕೃಷ್ಣರ ಪೋಷಕರಾದ ಲಕ್ಷ್ಮಣನ್ ಹಾಗೂ ಅನಿತಮೋಲಿ ಪಾಲಕ್ಕಾಡ್ ಜಿಲ್ಲೆಯವರಾಗಿದ್ದಾರೆ. ಇವರ ಸಂಬಂಧಿಕರಾದ ಬಿನು ಆಲಪ್ಪುಳದವರಾಗಿದ್ದಾರೆ.

ಮದುವೆ ಸಮಾರಂಭಕ್ಕಾಗಿ ಅನಿತಮೋಲಿ ತಮ್ಮ ಎರಡು ಮಕ್ಕಳೊಂದಿಗೆ ಬಿನು ಅವರ ಮನೆಗೆ ಬಂದಿದ್ದಾರೆ. ಅಲ್ಲದೆ ತಮ್ಮ ಸಹೋದರನ ಮಗನೂ ಇದೇ ವೇಳೆ ವಿವಾಹ ಸಮಾರಂಭಕ್ಕಾಗಿ ಬಂದಿದ್ದ. ಈ ವೇಳೆ ನೋಡಿಕೊಂಡು ಬರಲು ಬಿನು ಇವರನ್ನು ಬೀಚ್‍ಗೆ ಕರೆದುಕೊಂಡು ಬಂದಿದ್ದಾರೆ.

ಬೀಚ್ ಬಳಿ ಬರುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ಸಮುದ್ರದ ತಟದಲ್ಲಿ ಪರಿಸ್ಥಿತಿ ಸರಿ ಇಲ್ಲದ ಕಾರಣ ಬೀಚ್‍ನ ಮುಖ್ಯ ಭಾಗಕ್ಕೆ ಪ್ರವೇಶಿಸದಂತೆ ಸೂಚಿಸಿದ್ದಾರೆ. ಹೀಗಾಗಿ ಇವರು ಇಎಸ್‍ಐ ಆಸ್ಪತ್ರೆ ಬಳಿಯಿಂದ ಈ ಬೀಚ್‍ಗೆ ಹೋಗಿದ್ದಾರೆ. ಬಿನು ಕಾರ್ ಪಾರ್ಕ್ ಮಾಡಲು ತೆರಳಿದ್ದಾರೆ. ಈ ವೇಳೆ ಅನಿತಮೋಲಿ ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇದ್ದಕ್ಕಿದ್ದಂತೆ ಬೃಹತ್ ಅಲೆಯೊಂದು ಅಪ್ಪಳಿಸಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಆದಿಕೃಷ್ಣನನ್ನು ಅನಿತಮೋಲಿ ತಮ್ಮ ಕಂಕುಳಲ್ಲಿ ಎತ್ತಿಕೊಂಡಿದ್ದರು. ಬೃಹತ್ ಅಲೆಗೆ ಸಿಲುಕಿ ಮಗು ಕೊಚ್ಚಿಕೊಂಡು ಹೋಗಿದೆ. ಉಳಿದ ಇಬ್ಬರು ಮಕ್ಕಳು ಹಾಗೂ ಅಮಿತಮೋಲಿಯನ್ನು ಬಿನು ಎಳೆದು ತಂದರು ಎಂದು ತಿಳಿಸಿದ್ದಾರೆ. ಈ ಮಧ್ಯೆ ಮಕ್ಕಳನ್ನು ಬೀಚ್‍ಗೆ ಕರೆದೊಯ್ದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಜಿಲ್ಲಾ ಮಕ್ಕಳ ಸಮಿತಿ ಒತ್ತಾಯಿಸಿದೆ.

Share This Article
Leave a Comment

Leave a Reply

Your email address will not be published. Required fields are marked *