ಬಿಸಿ ಪಾಟೀಲ್‍ಗೆ ಮನೆಯಲ್ಲಿ ಲಸಿಕೆ ನೀಡಿದ ಆರೋಗ್ಯಾಧಿಕಾರಿ ಅಮಾನತು

Public TV
1 Min Read

ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನೆಯಲ್ಲಿಯೇ ಕೊರೊನಾ ಲಸಿಕೆಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲ್ಲೂಕು ವೈದ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಟಿಎಚ್‍ಒ ಡಾ.ಝಡ್.ಆರ್.ಮಕಾಂದಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 2 ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮನೆಯಲ್ಲಿಯೇ ದಂಪತಿಗೆ ವಾಕ್ಸಿನ್ ನೀಡಿದ್ದು ದೊಡ್ಡಮಟ್ಟದ ವಿವಾದವಾಗಿತ್ತು. ಅಲ್ಲದೆ ಮನೆಯಲ್ಲಿಯೇ ಲಸಿಕೆ ನೀಡಿದ್ದಕ್ಕೆ ಹಾವೇರಿಯ ಡಿಎಚ್‍ಓ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈಗ ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ.ತ್ರೀಲೋಕಚಂದ್ರ ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಕೊರೊನಾ ಲಸಿಕೆ ಹಂಚಿಕೆ ಮಾರ್ಗಸೂಚಿಗಳ ಪ್ರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲೇ ಲಸಿಕೆಯನ್ನು ನೀಡಬೇಕು. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆಗಿತ್ತು. ಮಕಾಂದಾರ ಸೂಚನೆಯಂತೆ ಕಿಟ್ ಹೊರಗೆ ತಂದು ಸಚಿವರ ಮನೆಗೆ ತೆರಳಿ ತಾಲೂಕಾಸ್ಪತ್ರೆಯ ಸಿಬ್ಬಂದಿ ಲಸಿಕೆ ಹಾಕಿದ್ದರು.

ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದ ಸಂಬಂಧ ಡಾ. ಮಕಾಂದಾರ್ ಅವರಿಗೆ ಕಾರಣ ಕೇಳಿ ಡಾ.ರಾಜೇಂದ್ರ ದೊಡ್ಡಮನಿ ಅವರು ಮಾರ್ಚ್ 2 ರಂದು ನೋಟಿಸ್ ಜಾರಿ ಮಾಡಿದ್ದರು. ಸಚಿವರು ತಾಲೂಕಿನ ಪ್ರಥಮ ಪ್ರಜೆಯಾಗಿದ್ದಾರೆ. ಅವರಿಗೆ ಬೈಲ್ಯಾಟರಲ್ ನೀ ಆಸ್ಟಿಯೋ ಆಥ್ರ್ರಿಟಿಸ್ ಹಾಗೂ ಕ್ರಾನಿಕ್ ಲೋಬ್ಯಾಕ್ ಎಖ್‍ಆರೋಗ್ಯ ಸಮಸ್ಯೆ ಇರುವುದರಿಂದ ಸಚಿವರ ಕರೆಯ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅವಶ್ಯಕ ತುರ್ತು ಸೇವೆ ಅಂಬುಲೆನ್ಸ್ ಹಾಗೂ ಔಷಧಗಳೊಂದಿಗೆ ಸಚಿವರಿಗೆ ಕೋವಿಡ್-19 ಲಸಿಕೆಯನ್ನು ನೀಡಿ ನಂತರ 30 ನಿಮಿಷಗಳವರೆಗೆ ನಿಗಾವಹಿಸಲಾಗಿತ್ತು. ಇನ್ನು ಮುಂದೆ ಕೋವಿಡ್-19 ಮಾರ್ಗಸೂಚಿ ಪ್ರಕಾರ ಸಾರ್ವಜನಿಕರಿಗೆ ಲಸಿಕೆ ನೀಡುತ್ತೇವೆ ಎಂದು ಉತ್ತರ ನೀಡಿದ್ದರು.

ಮನೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದನ್ನು ಬಿಸಿ ಪಾಟೀಲ್ ಸಮರ್ಥಿಸಿಕೊಂಡಿದ್ದರು. ದೊಡ್ಡ ವಿಷಯವೇನಲ್ಲ. ಅದರಲ್ಲಿ ತಪ್ಪೇನಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರಶ್ನಿಸಿದ್ದರು. ನಾವೇನು ಅಪರಾಧ ಮಾಡಿದ್ದೇವಾ? ಕಳ್ಳತನ ಮಾಡಿದ್ದೀವಾ.? ನಾನು ಸರ್ಕಾರದ ಒಂದು ಭಾಗ. ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿಯಾಗಿದ್ದೇನೆ. ಈ ವಿಷಯ ಎಲ್ಲರಿಗೂ ತಿಳಿಯಿತು. ಇದರಿಂದ ಇನ್ನಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಾರೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *