ಬಿಳ್ಹಾರ ಗ್ರಾಮಸ್ಥರಿಗೆ ಗಿಫ್ಟ್ ನೀಡಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯ

Public TV
2 Min Read

– ಬೆಳಗ್ಗೆಯಿಂದ ಸಂಜೆವರೆಗೆ ಸಮಸ್ಯೆ ಆಲಿಸಿದ ಡಿಸಿ
– ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ
– ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

ಯಾದಗಿರಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಯಾದಗಿರಿ ಡಿಸಿ ಡಾ. ರಾಗಪ್ರಿಯ ಇಂದು ಜಿಲ್ಲೆಯ ವಡಗೇರಾ ತಾಲೂಕಿನ ಬಿಳ್ಹಾರ ಗ್ರಾಮದಲ್ಲಿ ವಾಸ್ತವ್ಯ ಮಾಡಿದರು. ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಜನರ ಸಮಸ್ಯೆ ಆಲಿಸಿದ ಡಿಸಿಯವರು ಬಿಳ್ಹಾರ ಗ್ರಾಮಸ್ಥರಿಗೆ ಹಲವಾರು ಗಿಫ್ಟ್ ಗಳನ್ನು ನೀಡಿದ್ದಾರೆ.

ಕಂದಾಯ ಇಲಾಖೆಯ ವ್ಯಾಜ್ಯಗಳ ವಿಚಾರಣೆ ಜೊತೆಗೆ ಗ್ರಾಮದ ವಿವಿಧ ಕಡೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನು ಅರಿತು ಸ್ಥಳದಲ್ಲೇ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದಾರೆ. ಮೊದಲಿಗೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಅವುಗಳ ದುರಸ್ಥಿ ಕಂಡು ಮೂರು ಹೊಸ ಕಟ್ಟಗಳನ್ನು ಮಂಜೂರು ಮಾಡಿದರು. ಬಿಳ್ಹಾರ ಮತ್ತು ಬೂದಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ಪರಿಶೀಲನೆ ನಡೆಸಿ, ಸೇತುವೆ ನಿರ್ವಹಣೆಗೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಗಳಿಗೆ ಭೇಟಿ ನೀಡಿದ ಡಿಸಿ ವಿದ್ಯಾರ್ಥಿಗಳ ಜೊತೆ ಕೆಲ ಸಮಯ ಕಳೆದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಅನುದಾನ ಬಿಡುಗಡೆ ಭರವಸೆ ನೀಡಿದರು. ರುದ್ರಭೂಮಿ ಗ್ರಾಮಸ್ಥರು ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಇಂದು ಗ್ರಾಮ ವಾಸ್ತವ್ಯ ವೇಳೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿ ರಾಗಪ್ರಿಯ ಶವಸಂಸ್ಕಾರಕ್ಕೆ 2.5 ಎಕರೆ ಸರ್ಕಾರಿ ಭೂಮಿಯನ್ನು ಸ್ಥಳದಲ್ಲಿಯೇ ಮಂಜೂರು ಮಾಡಿದರು.

ವಿದ್ಯಾರ್ಥಿಗಳು ಬಿಳ್ಹಾರ ಗ್ರಾಮದ ಶಾಲೆಗೆ ಬರಲು ಬಸ್ ಸೌಕರ್ಯ ಕೊರತೆಯಿದೆ. ಹೀಗಾಗಿ ಶಾಲೆಗೆ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕಂದಹಳ್ಳಿ, ಬೆನನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳ ಬಳಿ ಕೇಳಿಕೊಂಡರು. ಕಾರ್ಯಕ್ರಮದಲ್ಲಿ ಯಾವುದೇ ಕೊರೊನಾ ನಿಯಮಾವಳಿಗಳು ಪಾಲನೆಯಾಗಲಿಲ್ಲ. ಜನ ಗುಂಪು ಗುಂಪಾಗಿ, ಮಾಸ್ಕ್ ಇಲ್ಲದೆ ವೇದಿಕೆ ಬಳಿ ಬಂದು ಸಮಸ್ಯೆ ಹೇಳಿಕೊಂಡ್ರು. ಇದರ ನಡುವೆಯೆ ಜಿಲ್ಲಾಧಿಕಾರಿಗಳು 40ಕ್ಕೂ ಅಧಿಕ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿ, ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ರು.

ಜಿಲ್ಲಾಧಿಕಾರಿಗಳ ಜೊತೆ ಅಪಾರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಆಯುಕ್ತ ಶಂಕರ್ ಗೌಡ ಸೋಮನಾಳ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *