ಬಿಜೆಪಿ ಸೇರಿದ ಅಣ್ಣಾಮಲೈ ವಿರುದ್ಧ ದೂರು ದಾಖಲು

Public TV
2 Min Read

– ನಾಲ್ವರು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ದೂರು

ಚೆನ್ನೈ: ಇತ್ತೀಚೆಗಷ್ಟೆ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ಕಾನೂನುಬಾಹಿರ ಸಭೆ ನಡೆಸಿದ ಕಾರಣ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಕೊಯಮತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ- ಅಣ್ಣಾಮಲೈ

ಅಣ್ಣಾಮಲೈ ಜೊತೆಗೆ ಇತರ ನಾಲ್ಕು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ದೂರು ದಾಖಲಾಗಿದೆ. ಜಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ಸೆಲ್ವಕುಮಾರ್, ರಾಜ್ಯ ಖಜಾಂಚಿ ಎಸ್.ಆರ್.ಶೇಖರ್ ಮತ್ತು ರಾಜ್ಯ ಉಪಾಧ್ಯಕ್ಷ ಕನಗಸಬಪತಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಯಮತ್ತೂರು ನಗರದ ಕಟೂರ್ ಪೊಲೀಸ್ ಠಾಣೆ ಐಪಿಸಿಯ ಸೆಕ್ಷನ್ ಮತ್ತು ಕೋವಿಡ್ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಐವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದೆ ಎಂದು ತಿಳಿದುಬಂದಿದೆ.

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ತಮ್ಮ ಖಡಕ್ ನಿರ್ಧಾರಗಳು ಮತ್ತು ಅಡಳಿತದಿಂದ ‘ಸಿಂಗಂ’ ಎಂಬ ಹೆಸರು ಪಡೆದುಕೊಂಡಿದ್ದರು. ನಂತರ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಊರು ತಮಿಳುನಾಡಿಗೆ ಹೋಗಿದ್ದರು. ಸೋಮವಾರ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಗುರುವಾರ ಅಣ್ಣಾಮಲೈ ಅವರು ಕೊಯಮತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸೇರಿದಂತೆ 50ಕ್ಕೂ ಹೆಚ್ಚಿನ ಜನರು ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದರು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವೇಳೆ ಅಣ್ಣಾಮಲೈ ಕೂಡ ವಾಹನದಲ್ಲಿ ನಿಂತುಕೊಂಡೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದಂತಾಗಿತ್ತು.

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಕಾರ್ಯಕರ್ತರರ ವಿರುದ್ಧ ನಗರ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಜನಸಮೂಹವನ್ನು ಒಟ್ಟುಗೂಡಿಸುವ ಮೂಲಕ ಸಮಾರಂಭವನ್ನು ನಡೆಸಿದ್ದಾರೆ ಎಂದು ಗಣನೆಗೆ ತೆಗೆದುಕೊಂಡಿದ್ದಾರೆ. ಆದರೆ ನಗರದಲ್ಲಿ ಲಾಕ್‍ಡೌನ್ ಪ್ರೋಟೋಕಾಲ್ ಜಾರಿಯಲ್ಲಿದೆ. ಆದ್ದರಿಂದ ಅಣ್ಣಾಮಲೈ, ನಂದಕುಮಾರ್, ಸೆಲ್ವಕುಮಾರ್, ಶೇಖರ್ ಮತ್ತು ಕನಗಸಬಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *