ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಸಮಾಜದಿಂದಲೇ ಬಹಿಷ್ಕಾರ

Public TV
2 Min Read

ಹುಬ್ಬಳ್ಳಿ: ಬಿಜೆಪಿ ಸೇರಿದ್ದಕ್ಕೆ ಮುಸ್ಲಿಂ ಮುಖಂಡರೊಬ್ಬರನ್ನು ಜಮಾತ್‍ನಿಂದ ಹೊರ ಹಾಕಿದ್ದು, ನನಗೆ ನ್ಯಾಯ ಕೊಡಿಸಬೇಕು. ಬಹಿಷ್ಕಾರ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮಾಜದ ಮುಖಂಡ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ನಗರದ ಮುಲ್ಲಾ ಓಣಿಯ ಅಬ್ದುಲ್ ಮುನಾಫ್ ಐನಾಪುರಿ ಅವರು ಮಾರ್ಚ್ 7ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ತಮ್ಮನ್ನು ಜಮಾತ್‍ನವರು ಹೊರ ಹಾಕಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸಿದ್ದು, ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ ಮುಲ್ಲಾ ಓಣಿಯ ಮಸೀದಿಯಲ್ಲಿನ ವಕ್ಫ್ ಬೋರ್ಡ್ ಕಟ್ಟಡದಲ್ಲಿ ನಮ್ಮ ಕುಟುಂಬ 40 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅಂಗಡಿಯನ್ನು ತೆರವು ಮಾಡುವಂತೆ ಒತ್ತಡ ಹೇರಿ, ನೋಟಿಸ್ ನೀಡಿ ಸಮಾಜದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಅಬ್ದುಲ್ ಐನಾಪುರಿ ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸಮ್ಮುಖದಲ್ಲಿ ಅವರ ನಿವಾಸದಲ್ಲಿ ಬಿಜೆಪಿ ಸೇರಿದ್ದೇನೆ. ಅಂದೇ ಜಮಾತ್‍ನ ಸಭೆ ನಡೆಸಿ, ಬಿಜೆಪಿ ಸೇರಿರುವುದಕ್ಕೆ ಆಕ್ಷೇಪಿಸಿದ್ದಾರೆ. ಅಲ್ಲದೆ ಬಿಜೆಪಿ ಏಕೆ ಸೇರಿದೆ ಎಂದು ಸಮಾಜದ ಮುಖಂಡರು ಪ್ರಶ್ನಿಸಿದರು. ನಂತರ ಬಿಜೆಪಿ ಸೇರಿದ್ದಕ್ಕೆ ಬಹಿಷ್ಕಾರ ಮಾಡುತ್ತೇವೆ. ಇಲ್ಲದಿದ್ದಲ್ಲಿ ಬಿಜೆಪಿ ಬಿಟ್ಟು ಬಾ ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪದ್ದಕ್ಕೆ ನನ್ನ ಅಂಗಡಿ ಖಾಲಿ ಮಾಡುವಂತೆ ತಿಳಿಸಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಾವು ಆರು ಜನ ಸಹೋದರರಿದ್ದು, ನಾಲ್ವರು ಬಿಜೆಪಿ ಸೇರಿರುವ ನನ್ನ ನಿಲುವನ್ನು ಬೆಂಬಲಿಸಿದ್ದಾರೆ. ಇನ್ನಿಬ್ಬರು ಬಿಜೆಪಿ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಸಹೋದರರನ್ನು ಸಹ ಇದೀಗ ಜಮಾತ್ ನವರು ಹೆದರಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ನಾನು 10 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಆದರೆ ನನ್ನ ಯಾವುದೇ ಕೆಲಸಗಳಿಗೂ ಕಾಂಗ್ರೆಸ್‍ನಲ್ಲಿ ಸ್ಪಂದಿಸಲಿಲ್ಲ. ಜೊತೆಗೆ ಜಗದೀಶ್ ಶೆಟ್ಟರ್ ಅವರು ಜಾತ್ಯತೀತ ನಿಲುವಿನವರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಯಾವುದಾದರೂ ಸಣ್ಣ ಪುಟ್ಟ ಕೆಲಸಗಳನ್ನು ಕೇಳಿದರೆ ಅವರು ಮಾಡಿಕೊಡುತ್ತಿದ್ದರು. ಅದಕ್ಕಾಗಿ ಅವರ ಕಾರ್ಯವೈಖರಿ ಮೆಚ್ಚಿ ನಾನು ಬಿಜೆಪಿ ಸೇರಿದೆ. ಆದರೆ ಇದೀಗ ನನ್ನನ್ನು ನಮ್ಮ ಸಮಾಜದಿಂದ ಬಹಿಷ್ಕಾರ ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಬೇಕು ಎಂದು ಕೋರಿದ್ದಾರೆ. ಈ ಕುರಿತು ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಅವರ ಗಮನಕ್ಕೂ ತಂದಿದ್ದಾರೆ. ಬಿಜೆಪಿ ನಾಯಕರು ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದು, ಹಿರಿಯರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *