ಬಿಜೆಪಿಗೆ ಬಿಗ್ ಶಾಕ್- ನಾಳೆ ಎಎಪಿ ಸೇರಲಿದ್ದಾರೆ ಕಮಲ ಶಾಸಕ

Public TV
2 Min Read

ಬೆಂಗಳೂರು: ಬಿಜೆಪಿಗೆ ಬಿಗ್ ಶಾಕ್ ಎದುರಾಗುತ್ತಿದ್ದು, ಬಿಜೆಪಿ ಶಾಸಕ ನಾಳೆ ಆಮ್ ಆದ್ಮಿ ಪಕ್ಷ ಸೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಶಾಸಕ ಎಂಬುದನ್ನು ಎಎಪಿ ತಿಳಿಸಿಲ್ಲ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ, ಬಿಜೆಪಿ ಶಾಸಕ ಪಕ್ಷ ಸೇರುತ್ತಿರುವ ಕುರಿತು ತಿಳಿಸಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ನಡೆಯಲಿರುವ ಆಮ್ ಆದ್ಮಿ ಪಕ್ಷದ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ. ಎಎಪಿ ಸೇರ್ಪಡೆಯಾಗಲಿರುವ ಬಿಜೆಪಿ ಶಾಸಕ ಯಾರೆಂದು ನಾಳೆ ಹೇಳುತ್ತೇವೆ. ಈಗಾಗಲೇ ಅವರ ಜೊತೆ ಮಾತುಕತೆ ನಡೆದಿದೆ. ಶಾಸಕ ಯಾರು ಎಂಬ ಕುತೂಹಲಕ್ಕೆ ನಾಳೆ ಉತ್ತರ ಸಿಗಲಿದೆ ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್.ವಿ.ಸದಂ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್‍ನಲ್ಲಿ ಬಿಜೆಪಿ ಹಾಳಾಗ್ತಿದೆ : ಹೆಚ್.ವಿಶ್ವನಾಥ್

ಎಎಪಿ ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಆಂತರಿಕ ಒಳ ಜಗಳಗಳು, ಸ್ವ ಹಿತಾಸಕ್ತಿಯ ರಾಜಕಾರಣ, ಸಾಂವಿಧಾನಿಕ ಅಧಿಕಾರ ದುರ್ಬಳಕೆ, ಕುಟುಂಬ ಭ್ರಷ್ಟಾಚಾರ ಇವೆಲ್ಲವುಗಳಿಂದ ಬೇಸತ್ತಿರುವ ಬಿಜೆಪಿ ಶಾಸಕರು, ದೇಶದ ಪ್ರಸ್ತುತ ಏಕೈಕ ಆಶಾಕಿರಣವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಾರದರ್ಶಕ, ಪ್ರಾಮಾಣಿಕ, ಭ್ರಷ್ಟಮುಕ್ತ ಆಡಳಿತವನ್ನು ಮೆಚ್ಚಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕರ್ನಾಟಕ ರಾಜಕೀಯದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ.

ಪರ್ಯಾಯ ರಾಜಕಾರಣದ ನಮ್ಮ ಪ್ರಯತ್ನದಲ್ಲಿ ಈ ಬೆಳವಣಿಗೆ ಸಂತಸದ ವಿಷಯವಾಗಿದೆ. ಈ ಮಹತ್ವದ ಕಾರ್ಯಕ್ರಮವು ಜುಲೈ 9, ಶುಕ್ರವಾರದಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆಯಲಿದೆ. ಆಮ್ ಆದ್ಮಿ ಪಾರ್ಟಿಯ ಕರ್ನಾಟಕದ ಉಸ್ತುವಾರಿ ರೋಮಿ ಭಾಟಿ ಹಾಗೂ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.

ಅಕ್ರಮ ಕಲ್ಲು ಗಣಿಗಾರಿಕೆ ರೂವಾರಿ ಎಚ್‍ಡಿಕೆ
ಅಕ್ರಮ ಕಲ್ಲು ಗಣಿಗಾರಿಕೆಗೆ ಎಚ್.ಡಿ.ಕುಮಾರಸ್ವಾಮಿಯೇ ಪ್ರಮುಖ ರೂವಾರಿ. ಹಳೆ ಮೈಸೂರು ಭಾಗದ ವಿವಿಧೆಡೆ ಎಚ್‍ಡಿಕೆ ಹಾಗೂ ಅವರ ಆಪ್ತರಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಬೆಂಬಲವಾಗಿ ನಿಂತಿದೆ ಎಂದು ಜಗದೀಶ್ ವಿ. ಸದಂ ಆರೋಪಿಸಿದ್ದಾರೆ.

ಕೆಆರ್‍ಎಸ್ ನಿರ್ಮಾಣದ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಮುಂತಾದ ಮಹನೀಯರ ಶ್ರಮವಿದೆ. ಕೆಆರ್‍ಎಸ್ ಸಮೀಪ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಅಣೆಕಟ್ಟೆ ಒಡೆದು ಹೋದರೆ ಭಾರೀ ಅನಾಹುತ ಸಂಭವಿಸಲಿದೆ. ಅಕ್ರಮದ ವಿರುದ್ಧ ಧ್ವನಿ ಎತ್ತಿರುವ ಸುಮಲತಾ ವಿರುದ್ಧ ಎಚ್‍ಡಿಕೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಾಚಿಕೆಗೇಡು. ಕೆಆರ್‍ಎಸ್‍ನಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಸದ್ಯ 80ಕ್ಕೂ ಹೆಚ್ಚು ಕ್ರಷರ್ ಗಳಿವೆ. ಈ ಪೈಕಿ 50 ಕ್ರಷರ್ ಅನಧಿಕೃತ ಎಂದು ಆರೋಪಿಸಿದ್ದಾರೆ.

ಹಂಗರಹಳ್ಳಿಯಿಂದ ಪ್ರತಿದಿನ 500ಕ್ಕೂ ಹೆಚ್ಚು ಲಾರಿಗಳಲ್ಲಿ ಕಲ್ಲುಗಳು ಹೋಗುತ್ತಿವೆ. ಅಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಅನೇಕ ಮುಖಂಡರು ಶಾಮೀಲಾಗಿದ್ದಾರೆ. ದಂಧೆಯ ಪ್ರಮುಖ ರೂವಾರಿಯಾಗಿ ಎಚ್.ಡಿ.ಕುಮಾರಸ್ವಾಮಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎಚ್ ಡಿಕೆಗೆ ಸಹಾಯಕರಾಗಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಪುಟ್ಟರಾಜು ಇದ್ದಾರೆ. ಇವರೆಲ್ಲರಿಗೂ ಸಪೋರ್ಟ್ ಮಾಡುತ್ತಿರುವ ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *