ಬಿಗ್ ಬಿ ಮುಂದೆ ಕರೋಡ್ ಪತಿ ಸೀಟಲ್ಲಿ ಕುಳಿತ ಉಡುಪಿಯ ರವಿ ಕಟಪಾಡಿ!

Public TV
2 Min Read

– ವೇಷ ಧರಿಸಿ ಅನಾರೋಗ್ಯಕ್ಕೀಡಾದ ಮಕ್ಕಳಿಗೆ ದಾನ

ಉಡುಪಿ: ಪಬ್ಲಿಕ್ ಹೀರೋ, ಸಮಾಜಸೇವಕ ಉಡುಪಿಯ ರವಿ ಕಟಪಾಡಿ ಅವರು ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಕರೋಡ್ ಪತಿ ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಅರವಿ ಕಟಪಾಡಿ ಅವರು ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಿ ಸಂದರ್ಭ ಪ್ರತಿವರ್ಷ ವಿಭಿನ್ನ ವೇಷಗಳನ್ನು ಧರಿಸಿ ಬಂದ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ದಾನ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಕಳೆದ ಒಂದು ದಶಕದಿಂದ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಡತನದ ಜೀವನ ನಡೆಸುವ ರವಿ ಕಟಪಾಡಿ, ಸಿಮೆಂಟ್ ಸೆಂಟ್ರಿಂಗ್ ಕೆಲಸ ಮಾಡುತ್ತಾರೆ. ಪ್ರತಿವರ್ಷ ವೇಷ ಧರಿಸಿ ಸಂಗ್ರಹವಾದ ಲಕ್ಷಾಂತರ ರೂಪಾಯಿ ದೇಣಿಗೆಯನ್ನು ಏಳೆಂಟು ಮಕ್ಕಳಿಗೆ ನೀಡುತ್ತಾ ಬಂದಿದ್ದಾರೆ.

ಇದೀಗ ರವಿ ಕಟಪಾಡಿಯವರ ವಿಭಿನ್ನ ಸೇವೆಯನ್ನು ಪರಿಗಣಿಸಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕಾರ್ಯಕ್ರಮದ ಕರ್ಮವೀರ್ ವಿಭಾಗದಲ್ಲಿ ಈ ಬಾರಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಜನವರಿ 15 ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ. ರವಿ ಮತ್ತು ಅನುಪಮ್ ಕೇರ್ ಎಷ್ಟು ಗೆದ್ದಿದ್ದಾರೆ ಅಂತ ನಾಳೆ ಗೊತ್ತಾಗಲಿದೆ, ಅಲ್ಲಿವರೆಗೆ ಆ ವಿಚಾರ ನಿಯಮದಂತೆ ಗೌಪ್ಯವಾಗಿರಲಿದೆ.

ಹಿಂದಿ ನಟ ಅನುಪಮ್ ಖೇರ್ ಮತ್ತು ರವಿ ಕಟಪಾಡಿ ಜೋಡಿಯಾಗಿ ಕರೋಡ್ ಪತಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಿಂದ ರವಿಗೆ ಆಫರ್ ಬಂದಾಗ ನನಗೆ ಹಿಂದಿ ಭಾಷೆ ಬರುವುದಿಲ್ಲ. ಪ್ರಶ್ನೆ ಎಲ್ಲಾ ಅರ್ಥ ಆಗಲಿಕ್ಕಿಲ್ಲ. ಭಾಷೆಯ ಸಮಸ್ಯೆಯಾಗುತ್ತದೆ. ನನಗೆ ನರ್ವಸ್ ಆಗುತ್ತದೆ ಎಂದು ಹಿಂಜರಿದಿದ್ದರು. ರವಿಯ ಗೆಳೆಯರು ಮನವೊಲಿಸಿದ ನಂತರ ಸ್ಪರ್ಧಿಸಲು ಒಪ್ಪಿದ್ದು ಮುಂಬೈಗೆ ರವಿ ತೆರಳಿದ್ದಾರೆ.

ಈವರೆಗೆ 52 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಸನ್ಮಾನ ಮಾಡಿ, ಮನೆ ಕಟ್ಟಲು ಮಂಗಳೂರಿನ ಬರ್ಕೆ ಫ್ರೆಂಡ್ಸ್ ಎರಡು ಲಕ್ಷ ರುಪಾಯಿ ಕೊಟ್ಟಿದ್ದರು. ಅನಾರೋಗ್ಯ ಅಂತ ಬಂದಿದ್ದ ಒಂದು ಕುಟುಂಬಕ್ಕೆ ಆ ಹಣವನ್ನು ಕೂಡ ರವಿ ದಾನ ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಕಟಪಾಡಿ, ನಾನು, ತಾಯಿ 45 ವರ್ಷ ಹಿಂದಿನ ಮನೆಯಲ್ಲಿ ಇದ್ದೇವೆ. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಷ್ಟ ನೋಡಿದರೆ ನಮ್ಮದೇನು ದೊಡ್ಡ ವಿಷಯವಲ್ಲ ಅಂತ ಹೇಳಿದ್ರು. ಅಮಿತಾಭ್ ಬಚ್ಚನ್ ಮುಂದೆ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದು ಒಂದು ಭಾಗ್ಯ ಅಂತ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *