ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

Public TV
2 Min Read

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ಮಂಜು ಪಾವಗಡ ಅವರು ವಿನ್ನರ್ ಆಗಿದ್ದಾರೆ. ಗೆದ್ದ ಖುಷಿಯಲ್ಲಿರುವ ಮಂಜು ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ದೊಡ್ಮೆನಯಲ್ಲಿ ಕಲಿತಿದ್ದೇನು ಹಾಗೂ ತಮ್ಮ ಮುಂದಿನ ಯೋಜನೆ, ಯೋಜನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇದು ಬಿಗ್ ಬಾಸ್ ಅಲ್ಲ. ಇಲ್ಲಿ ನಾವು ಜೀವನದ ಪಾಠ ಕಲಿಯುತ್ತೇವೆ. ಜೀವನದಲ್ಲಿ ಪ್ರತಿಯೊಂದು ನಿರ್ಧಾರ ಎಷ್ಟು ಮುಖ್ಯ, ಯಾರ ಜೊತೆ ಸ್ನೇಹ ಮುಖ್ಯ, ಯಾವ ಸಮಯದಲ್ಲಿ ಯಾವ ನಿರ್ಧಾರ ಸೂಕ್ತವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ನಾವು ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿದ್ದರೆ, ಅದಕ್ಕೆ ಮುಂದೆ ನಾವೇನು ಮಾಡಬೇಕು. ಕೂಡಲೇ ಕ್ಷಮೆ ಕೇಳಬೇಕಾ ಅಥವಾ ಯೋಚನೆ ಮಾಡಬೇಕಾ..?, ಒಂದು ಸಲ ನಿರ್ಧಾರ ತೆಗೆದುಕೊಳ್ಳಬೇಕಾದರೆ 10 ಸಲ ಯೋಚನೆ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಯೋಚನೆ ಮಾಡಿ ಮಾತಾಡಬೇಕು ಅನ್ನೋದನ್ನು ನಾನು ಬಿಗ್ ಬಾಸ್ ಮನೆಯಲ್ಲಿ ಕಲಿತಿದ್ದೇನೆ ಎಂದು ಹೇಳಿದರು.

ಮುಂದಿನ ಯೋಜನೆ, ಯೋಚನೆಗಳೆನು..?
ಸದ್ಯಕ್ಕೆ ಗೆದ್ದ ಖುಷಿಯಲ್ಲಿ ಏನು ಮಾಡಬೇಕು ಅಂತ ತೋಚುತ್ತಿಲ್ಲ. ಅಷ್ಟೇ ಅಲ್ಲದೆ ಮನೆಯಿಂದ ಹೊರಗಡೆ ಬಂದ ತಕ್ಷಣ ಜನರ ಪ್ರೀತಿ, ವಿಶ್ವಾಸ ಕಂಡು ಮೂಕನಾಗಿದ್ದೇನೆ ಎಂದು ಮಂಜು ತಿಳಿಸಿದರು. ಇದನ್ನೂ ಓದಿ: ಇಷ್ಟೊಂದು ದೊಡ್ಡ ಮೊತ್ತವನ್ನು ಜೀವನದಲ್ಲೇ ನೋಡಿಲ್ಲ: ಮಂಜು

ಕಲಾವಿದನಾದವನು ಮುಂದಿನ ದಿನಗಳಲ್ಲಿ ಅವಕಾಶಗಳಿಗೆ ಕಾಯುವುದಾಗಿದೆ. ಒಳ್ಳೊಳ್ಳೆಯ ಅವಕಾಶ ಸಿಗಬೇಕು. ಮುಂದೆ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ ಇದೆ. ದೊಡ್ಡ ದೊಡ್ಡವರ ಜೊತೆ ನಟನೆ ಮಾಡಬೇಕು, ಒಳ್ಳೊಳ್ಳೆಯ ಪಾತ್ರಗಳು ಸಿಗಬೇಕು ಎಂಬುದೇ ನನ್ನ ದೊಡ್ಡ ಆಸೆಯಾಗಿದೆ ಎಂದರು.

ಇಂತಹ ಕಥೆ ಮಾಡಬೇಕೆಂಬ ಯೋಚನೆಯಿಲ್ಲ. ಯಾಕಂದರೆ ನಾನೊಬ್ಬ ರಂಗಭೂಮಿ ಕಲಾವಿದ. ಹೀಗಾಗಿ ಇಂತದ್ದೇ ಪಾತ್ರ ಮಾಡಬೇಕು ಎಂಬ ಆಸೆ ಇಲ್ಲ. ನಾವೇನೇ ಮಾಡಿದರೂ ಜನಕ್ಕೋಸ್ಕರ. ಜನ ನನ್ನ ಇಷ್ಟಪಟ್ಟಿದ್ದಾರೆ. ಹೀಗಾಗಿ ಇದನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನನಗೂ ಖುಷಿ ಇದೆ ಎಂದು ಹೇಳಿದರು. ಇದನ್ನೂ ಓದಿ: ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

ಒಟ್ಟಿನಲ್ಲಿ ಬಿಗ್ ಬಾಸ್ ತಂಡಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನನ್ನ ಜೀವನವನ್ನೇ ಬದಲಾಯಿಸಿದೆ. ಇಷ್ಟು ಜನರ ಪ್ರೀತಿ ವಿಶ್ವಾಸ ಕೊಟ್ಟಿದೆ. ಜನ ನನ್ನ ಇಷ್ಟೊಂದು ಇಷ್ಟ ಪಡುತ್ತಾರೆ ಅಂದುಕೊಂಡಿರಲಿಲ್ಲ. ಹೀಗಾಗಿ ನನ್ನನ್ನು ಆ ವೇದಿಕೆಗೆ ಕರೆದುಕೊಂಡು ಹೋದ ಬಿಗ್ ಬಾಸ್ ತಂಡಕ್ಕೆ ನಾನು ಯಾವತ್ತೂ ಚಿರಋಣಿಯಾಗಿರುವುದಾಗಿ ಲ್ಯಾಗ್ ಮಂಜು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *