ಬೆಂಗಳೂರು: ಹೆಚ್ಚು ಕಡಿಮೆ ಎರಡು ತಿಂಗಳ ಲಾಕ್‍ಡೌನ್ ನಂತರ ರಾಜ್ಯ ಸರ್ಕಾರ ಬಿಎಂಟಿಸಿ, ಕೆಎಸ್‍ಆರ್ ಟಿಸಿ, ಆಟೋ, ಕ್ಯಾಬ್ ಓಲಾಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಜನ ಮಾತ್ರ ಸಾರ್ವಜನಿಕ ಸಾರಿಗೆ ಉಪಯೋಗಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಸಾಮಾನ್ಯವಾಗಿ ಬಸ್ಸುಗಳಿಗಾಗಿ ಜನ ಕಾಯೋದನ್ನು ನೋಡಿದ್ವಿ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಈ ಬಸ್ಸುಗಳೇ ಜನರಿಗೆ ಕಾಯ್ತಿರೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳ ಲಾಕ್‍ಡೌನ್ ನಿಂದ ಯಾವುದೇ ಸಾರಿಗೆ ಸೇವೆ ಇಲ್ಲದೇ ಜನ ಒದ್ದಾಡಿ ಹೋಗಿದ್ದರು.
ಕೊರೊನಾ ವೈರಸ್ ಮಧ್ಯೆಯೂ ಜನರ ಜೀವನ ಎಂದಿನಂತಾಗಲಿ ಅಂತ ರಾಜ್ಯ ಸರ್ಕಾರ ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಆಟೋ, ಕ್ಯಾಬ್ ಓಲಾ ಸೇರಿದಂತೆ ಬಹುತೇಕ ಎಲ್ಲಾ ಸಾರಿಗೆಯನ್ನು ಆರಂಭ ಮಾಡಿತ್ತು. ಕುತೂಹಲದಿಂದ ಸಾರಿಗೆ ಆರಂಭ ಮಾಡಿದ ರಾಜ್ಯ ಸರ್ಕಾರಕ್ಕೆ ಜನರಿಂದ ಸಿಕ್ಕಿದ್ದು ಮಾತ್ರ ಭಾರೀ ನಿರಾಸೆ. ಸೋಮವಾರ ಬೆಳಗ್ಗಿನ ಜಾವ ಒಂದಷ್ಟು ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ಬಂದಿದ್ದು ಬಿಟ್ರೆ, ಸಂಜೆವರೆಗೆ ಆಟೋ, ಒಲಾ, ಊಬರ್, ಬಿಎಂಟಿಸಿ, ಕೆಎಸ್‍ಆರ್ ಟಿಸಿ ಖಾಲಿ ಖಾಲಿಯಾಗಿದ್ದವು.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗ್ತಾನೆ ಇದ್ದಾರೆ. ರೆಡ್ ಝೋನ್‍ಗಳಿಂದ ಗ್ರೀನ್ ಝೋನ್‍ಗಳ ವರೆಗೆ ಕೊರೊನಾ ವೈರಸ್ ಶರವೇಗದಲ್ಲಿ ಹರಡಿಕೊಳ್ತಿದೆ. ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡೋದ್ರಿಂದ ಕೊರೊನಾ ವೈರಸ್ ಹರಡುವ ಭೀತಿಯೂ ಕೂಡ ಜನರನ್ನು ಪ್ರಯಾಣ ಮಾಡೋಕೆ ಹಿಂದೇಟು ಹಾಕುವಂತೆ ಮಾಡಿರಬಹುದು. ಮತ್ತೊಂದು ವಿಚಾರ ಅಂದ್ರೆ ಲಾಕ್ ಡೌನ್ ಸಮಯದಲ್ಲಿ ಬಹುತೇಕರು ಅನಿವಾರ್ಯವಾಗಿ ಸ್ವಂತ ವಾಹನಗಳು ಸೇರಿದಂತೆ ಪರ್ಯಾಯ ಮಾರ್ಗಗಳನ್ನು ಹುಡುಕಿ ಕೊಂಡಿದ್ದಾರೆ. ಅದರ ಜೊತೆಗೆ ಪ್ರಯಾಣ ಮಾಡೋ ಜನರೆಲ್ಲಾ ಬಹುತೇಕರು ಕೂಲಿ ಕಾರ್ಮಿಕರು ಆಗಿರೋದ್ರಿಂದ ಅವರೆಲ್ಲರು ತಮ್ಮ ತಮ್ಮ ಊರುಗಳಿಗೆ ವಾಪಸ್ಸು ಆಗಿರೋದು ಕೂಡ ಮತ್ತೊಂದು ಕಾರಣವಿರಬಹುದು ಎನ್ನಲಾಗಿದೆ.
ಇಂದು ಎರಡನೇ ದಿನವಾಗಿದ್ದು, ನಿಧಾನವಾಗಿ ಸಂಚಾರ ಹಿಂದಿನ ಸ್ಥಿತಿಗೆ ಬರುತ್ತೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ವೈರಸ್ ರಾಜ್ಯದಲ್ಲಿ ತನ್ನ ಡೆಡ್ಲಿ ರುದ್ರ ನರ್ತನ ಶುರುಮಾಡಿದ್ದು, ನಿಮ್ಮ ಜಾಗ್ರತೆಯಲ್ಲಿ ನೀವು ಇರೋದು ಬೆಸ್ಟ್.