ಬಾವಿಯಲ್ಲಿ 9 ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಪ್ರೇಯಸಿಯ ಕೊಲೆ ಮುಚ್ಚಾಕಲು 9 ಜನರ ಕೊಲೆ

Public TV
3 Min Read

– ಊಟದಲ್ಲಿ ನಿದ್ದೆ ಮಾತ್ರೆ ಹಾಕಿ, ಕತ್ತು ಹಿಸುಕಿ ಪ್ರಿಯತಮೆಯ ಮರ್ಡರ್
– ಗೋಣಿಚೀಲದಲ್ಲಿ ಹಾಕಿಕೊಂಡು ಒಬ್ಬೊಬ್ಬರಾಗಿ ಬಾವಿಗೆ ಎಸೆದ

ಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬಾವಿಯೊಂದರಲ್ಲಿ ಒಂಭತ್ತು ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರೇಯಸಿಯ ಕೊಲೆಯನ್ನು ಮುಚ್ಚಿ ಹಾಕಲು ಬರೋಬ್ಬರಿ 9 ಮಂದಿಯನ್ನು ಕೊಲೆ ಮಾಡಿರುವ ಸತ್ಯಾಂಶ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಎರಡು ದಿನದಲ್ಲಿ ಒಂದೇ ಬಾವಿಯಲ್ಲಿ 9 ಮೃತದೇಹಗಳು ಪತ್ತೆ

ಮೇ 21, 22 ರಂದು ಜಿಲ್ಲೆಯ ಗೊರ್ರೆಕುಂಟಾ ಗ್ರಾಮದಲ್ಲಿ ಒಂದೇ ಬಾವಿಯಲ್ಲಿ 9 ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಪೊಲೀಸ್ ತಂಡಗಳನ್ನು ನಿಯೋಜನೆ ಮಾಡಲಾಗಿತ್ತು. ಇದೀಗ ಈ ಪ್ರಕರಣ ಭೇದಿಸಿದ ಪೊಲೀಸರು ಆರೋಪಿ ಸಂಜಯ್‍ನನ್ನು ಬಂಧಿಸಿದ್ದಾರೆ. ಈತನೇ ತನ್ನ ಪ್ರೇಯಸಿ ಕೊಲೆಯನ್ನು ಮರೆ ಮಾಚಲು ಆಕೆಯ ಕುಟುಂಬದವರನ್ನು ಸೇರಿ ಮೂವರು ಸಹೋದ್ಯೋಗಿಗಳನ್ನು ಅಮಾನುಷವಾಗಿ ಕೊಲೆದ್ದಾನೆ.

ಏನಿದು ಪ್ರಕರಣ?
ಬಿಹಾರ್ ಮೂಲದ ಸಂಜಯ್ ಕುಮಾರ್ ಯಾದವ್ (30) ಗೊರ್ರೆಕುಂಟಾನಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಮೃತ ಮಕ್ಸೂದ್ ಆಲಂ ಸಂಬಂಧಿ ರಫಿಕಾ ಸುಮಾರು ಐದು ವರ್ಷಗಳ ಹಿಂದೆ ತನ್ನ ಮೂವರು ಮಕ್ಕಳೊಂದಿಗೆ ಮಕ್ಸೂದ್ ಮನೆಗೆ ಬಂದಿದ್ದಳು. ನಂತರ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆರೋಪಿ ಯಾದವ್ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ನಂತರ ರಫಿಕಾ ತನ್ನ ಮೂವರು ಮಕ್ಕಳೊಂದಿಗೆ ಯಾದವ್ ಮನೆಗೆ ಹೋಗಿದ್ದಾಳೆ ಎಂದು ವಾರಂಗಲ್ ಪೊಲೀಸ್ ಆಯುಕ್ತ ಡಾ.ವಿ.ರವಿಂದ್ರ ತಿಳಿಸಿದ್ದಾರೆ.

ಇತ್ತೀಚೆಗೆ ಆರೋಪಿ ರಫಿಕಾ ಮಗಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದನು. ಇದರಿಂದ ಕೋಪಗೊಂಡ ರಫಿಕಾ ಆತನಿಗೆ ಎಚ್ಚರಿಕೆ ನೀಡಿದ್ದಾಳೆ. ಕೊನೆಗೆ ರಫಿಕಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ಅದರಂತೆಯೇ ರಫಿಕಾಳಿಗೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಮದುವೆ ಬಗ್ಗೆ ತಮ್ಮ ಸಂಬಂಧಿಕರ ಜೊತೆ ಮಾತನಾಡುವುದಾಗಿ ಹೇಳಿ ಮಾರ್ಚ್ 7 ರಂದು ಯಾದವ್ ಮತ್ತು ರಫಿಕಾ ಪಶ್ಚಿಮ ಬಂಗಾಳಕ್ಕೆ ಗರಿಬ್ ರಾಥ್ ರೈಲಿನಲ್ಲಿ ತೆರಳಿದ್ದರು.

ಈ ವೇಳೆ ಯಾದವ್ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿದ್ದ ಮಜ್ಜಿಗೆಯನ್ನು ನೀಡಿದ್ದಾನೆ. ಅದನ್ನು ಕುಡಿದ ರಫಿಕಾ ಪ್ರಜ್ಞೆ ತಪ್ಪಿದ್ದಾಳೆ. ತಕ್ಷಣ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲಕ ಹಾದುಹೋಗುತ್ತಿದ್ದಾಗ ಆಕೆಯ ಶವವನ್ನು ಹೊರಗೆ ಎಸೆದಿದ್ದಾನೆ. ಮಹಿಳೆ ಶವ ಪತ್ತೆಯಾದ ನಂತರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಮಹಿಳೆ ಗುರುತನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಡಾ.ವಿ.ರವಿಂದ್ರ ತಿಳಿಸಿದ್ದಾರೆ.

ವಾಪಸ್ ಆಗಿದ್ದ ಯಾದವ್ ರಫಿಕಾಳ ಮೂವರು ಮಕ್ಕಳಿಗೆ ನಿಮ್ಮ ತಾಯಿ ಪಶ್ಚಿಮ ಬಂಗಾಳದಲ್ಲಿಯೇ ಉಳಿದುಕೊಂಡಿದ್ದಾಳೆ. ಕೆಲವು ದಿನಗಳ ನಂತರ ಹಿಂದಿರುಗುತ್ತಾಳೆ ಎಂದು ಹೇಳಿದ್ದಾನೆ. ಆದರೆ ಮಕ್ಸೂದ್ ಮತ್ತು ಪತ್ನಿ ನಿಶಾ ರಫಿಕಾ ಎಲ್ಲಿ, ನೀನು ಏಕೆ ಅಲ್ಲಿ ಬಿಟ್ಟು ಬಂದೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಯಾದವ್ ಸರಿಯಾಗಿ ಉತ್ತರ ಕೊಟ್ಟಿಲ್ಲ. ಇದರಿಂದ ಅನುಮಾನಗೊಂಡ ನಿಶಾ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದ್ದಳು. ಆಗ ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

ರಫಿಕಾಳ ಕುಟುಂಬದವರ ಕೊಲೆ:
ಮೇ 20 ರಂದು ಮಕ್ಸೂದ್ ಮಗನ ಹುಟ್ಟುಹಬ್ಬವಿತ್ತು. ಅಂದು ಯಾದವ್ 50-60 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದು, ಊಟದಲ್ಲಿ ಮಿಕ್ಸ್ ಮಾಡಿದ್ದಾನೆ. ಆ ಊಟವನ್ನು ಮಾಡಿದ್ದ ಮಕ್ಸೂದ್ ಕುಟುಂಬ ಮತ್ತೆ ಬಿಹಾರದ ಕಾರ್ಮಿಕರು ನಿದ್ದೆ ಮಾಡಿದ್ದಾರೆ. ಅಂದು ಆರೋಪಿ ಯಾದವ್ ಮಕ್ಸೂದ್ ಮನೆಯಲ್ಲಿಯೇ ಉಳಿದುಕೊಂಡಿದ್ದನು. ನಂತರ ಆರೋಪಿ ಯಾದವ್ ಮುಂಜಾನೆ 2 ಗಂಟೆಗೆ ಎದ್ದು ಎಲ್ಲರನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಬಾವಿ ಬಳಿ ಎಳೆದುಕೊಂಡು ಹೋಗಿ ಒಬ್ಬೊಬ್ಬರಾಗಿ ಬಾವಿಗೆ ಎಸೆದಿದ್ದಾನೆ. ಅವರೆಲ್ಲರನ್ನೂ ಬಾವಿಗೆ ಎಸೆಯಲು ಮೂರು ಗಂಟೆ ಬೇಕಾಯಿತು. ನಂತರ ಮತ್ತೆ ಸೈಕಲ್ ಮೂಲಕ ತನ್ನ ಮನೆಗೆ ಹೋಗಿದ್ದಾನೆ ಎಂದು ರವೀಂದ್ರ ತಿಳಿಸಿದ್ದಾರೆ.

ಮೃತ ಮಕ್ಸೂದ್ ಫೋನ್ ಡಿಟೈಲ್ಸ್ ಆಧಾರದ ಮೇಲೆ ಆರೋಪಿ ಯಾದವ್‍ನನ್ನ ಶಂಕಿತ ಎಂದು ಗುರುತಿಸಲಾಗಿತ್ತು. ಆದರೆ ಮೇ 20ರ ಆರೋಪಿ ಮಕ್ಸೂದ್ ಮನೆಯಿಂದ ಹೊರ ಬಂದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ 50-60 ನಿದ್ದೆ ಮಾತ್ರೆಗಳನ್ನು ಹೇಗೆ ಖರೀದಿಸಿದ್ದಾನೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *