ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ: ಭೂಮಿ ಪೂಜೆಗೂ ಮುನ್ನ ಓವೈಸಿ ಟ್ವೀಟ್

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದಕ್ಕೂ ಮೊದಲು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ”ಬಾಬ್ರಿ ಮಸೀದಿ ಇತ್ತು. ಇನ್ನು ಮುಂದೆಯೂ ಇರಲಿದೆ ಇನ್ಷಾ ಅಲ್ಲಾಹ್” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಬಾಬ್ರಿ ಮಸೀದಿ ಹಾಗೂ ಅದರ ಧ್ವಂಸಕ್ಕೆ ಕುರಿತಾದ ಎರಡು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಈ ಹಿಂದೆ ಟ್ವೀಟ್ ಮಾಡಿದ್ದ ಓವೈಸಿ, ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿಗಳು ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ. 1992ರಲ್ಲಿ ಕ್ರಿಮಿನಲ್ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬ್ರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಸುಪ್ರೀಂ ತೀರ್ಪು:
ವಿವಾದಾತ್ಮಕವಾಗಿದ್ದ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ತೀರ್ಪಿನಲ್ಲಿ ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಪ್ರತ್ಯೇಕ ಜಾಗ ನೀಡಬೇಕೆಂದು ಎಂದು ಹೇಳಿತ್ತು.

ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ. ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *