ಬಾಬಾ ರಾಮ್‍ದೇವ್ ಅವರಿಗೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದ ಐಎಂಎ

Public TV
2 Min Read

ನವದೆಹಲಿ: ಅಲೋಪತಿ ಔಷಧಿ ಕುರಿತು ಯೋಗ ಗುರು ಬಾಬಾ ರಾಮ್‍ದೇವ್ ನೀಡಿದ ಹೇಳಿಕೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದೆ.

ಬಾಬಾ ರಾಮ್‍ದೇವ್ ಅವರು ತಮ್ಮ ಹೇಳಿಕೆ ಕುರಿತು ವೀಡಿಯೋ ಪೋಸ್ಟ್ ಮಾಡಬೇಕು ಹಾಗೂ 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು.  ಇಲ್ಲವಾದಲ್ಲಿ 1000 ಕೋಟಿ ರೂ.ಗಳನ್ನು ಬೇಡಿಕೆ ಇಡುತ್ತೇವೆ ಎಂದು ಐಎಂಎ ನೋಟಿಸ್‍ನಲ್ಲಿ ಬರೆಯಲಾಗಿದೆ. ಅಲ್ಲದೆ ಐಎಂಎ ಪರವಾಗಿ ರಾಮ್‍ದೇವ್ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ ಎಂದು ಉತ್ತರಾಖಂಡ್ ವಿಭಾಗದ ಅಧ್ಯಕ್ಷ ಡಾ.ಅಜಯ್ ಖನ್ನಾ ಹೇಳಿದ್ದಾರೆ.

ಸೋಮವಾರ ಐಎಂಎನ ಉತ್ತರಾಖಂಡ್ ವಿಭಾಗ ಬಾಬಾ ರಾಮ್‍ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತಿರಾಥ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಬಾಬಾ ರಾಮ್‍ದೇವ್ ಹೇಳಿಕೆಯ ಕುರಿತು ಐಎಂಎ ವೈದ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಪತ್ರದ ಬಳಿಕ ಬಾಬಾ ರಾಮ್‍ದೇವ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸೋಮವಾರ ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದ ಅವರು, ಅಧಿಕ ರಕ್ತದೊತ್ತಡ(ಬಿಪಿ) ಹಾಗೂ ಟೈಪ್-1, ಟೈಪ್-2 ಮಧುಮೇಹ ಸೇರಿದಂತೆ ಮುಂತಾದ ಖಾಯಿಲೆಗಳಿಗೆ ಅಲೋಪತಿ ಶಾಶ್ವತ ಪರಿಹಾರ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೆ ಥೈರಾಯ್ಡ್, ಸಂಧಿವಾತ, ಕೊಲೈಟಿಸ್ ಹಾಗೂ ಅಸ್ತಮಾಗೆ ಫಾರ್ಮಾ ಉದ್ಯಮದಲ್ಲಿ ಶಾಶ್ವತ ಚಿಕಿತ್ಸೆ ಇದೆಯೇ ಎಂದಿದ್ದರು.

ಟಿಬಿ ಹಾಗೂ ಚಿಕನ್‍ಪಾಕ್ಸ್ ಗೆ ನೀವು ಪರಿಹಾರ ಕಂಡುಕೊಂಡಂತೆ, ಲಿವರ್‍ಗೆ ಸಂಬಂಧಿಸಿದ ಖಾಯಿಲೆಗಳಿತ್ತ ಸಹ ಗಮನ ಹರಿಸಿ ಎಂದಿದ್ದರು. ಇದೆಲ್ಲದರ ಬಳಿಕ ಅಲೋಪತಿಗೆ ಈಗ 200 ವರ್ಷಗಳು. ಅಲ್ಲದೆ ಅಲೋಪತಿ ಸರ್ವಶಕ್ತ ಮತ್ತು ‘ಸರ್ವಗುಣ ಸಂಪನ್ನ’ ಎನ್ನುವುದಾದರೆ ವೈದ್ಯರು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ಯೋಗ ಗುರು ಹೇಳಿದ್ದರು.

ಯೋಗ ಗುರು ಬಾಬಾ ರಾಮ್‍ದೇವ್ ಅವರು ಅಲೋಪಥಿಕ್ ಔಷಧದ ವಿರುದ್ಧದ ಹೇಳಿಕೆಗಳನ್ನು ಹಿಂಪಡೆದಿದ್ದಾರೆ. ಈ ವಿಷಯದ ವಿವಾದವನ್ನು ನಿಲ್ಲಿಸಿದ ರೀತಿ ಶ್ಲಾಘನೀಯ ಮತ್ತು ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ. ಭಾರತದ ಜನ ಕೋವಿಡ್-19 ಹೇಗೆ ಎದುರಿಸಿದ್ದಾರೆ ಎಂಬುದನ್ನು ನಾವು ಜಗತ್ತಿಗೆ ತೋರಿಸಬೇಕಿದೆ. ಖಂಡಿತ ನಮ್ಮ ಗೆಲುವು ನಿಶ್ಚಿತ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *