ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

Public TV
1 Min Read

ನೀವು ಬಾಡಿಗೆ ಮನೆಯಲ್ಲಿದ್ದೀರಾ? ಖರೀದಿಸಲು ಹೊಸ ಮನೆ ಹುಡುಕುತ್ತಿದ್ದೀರಾ? ಅದರಲ್ಲೂ ಕಡಿಮೆ ಬೆಲೆಗೆ ಗುಣಮಟ್ಟದ ಮನೆಯನ್ನೇ ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಗುಡ್‌ನ್ಯೂಸ್‌ ನೀಡಿದೆ.

ಬಿಡಿಎ ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆಯನ್ನು ಪ್ರಾರಂಭಿಸಿದೆ. ಮಾಳಗಾಳ(ನಾಗರಬಾವಿ), ಕಣಿಮಿಣಿಕೆ(ಕುಂಬಳಗೋಡು), ಕೊಮ್ಮಘಟ್ಟ(ಕೆಂಗೇರಿ, ನೈಸ್ ರಸ್ತೆ ಬಳಿ), ವಲಗೇರಹಳ್ಳಿ(ಕೆಂಗೇರಿ), ದೊಡ್ಡಬನಹಳ್ಳಿ(ಕೆ.ಆರ್.ಪುರಂ) ಬಡಾವಣೆಗಳಲ್ಲಿ ವಿವಿಧ ಅಳತೆಯ 1,381 ಫ್ಲಾಟ್‍ಗಳು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

ಈ ಹಿಂದೆ ಫ್ಲಾಟ್‍ಗಳನ್ನು ಖರೀದಿಸಲು ಪ್ರಾಧಿಕಾರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆ ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ವೆಬ್‍ಸೈಟ್ www.housing.bdabangalore.org ಗೆ ಭೇಟಿ ನೀಡಿ, ಫ್ಲಾಟ್‍ಗಳ ವಿವರ, ಬಡಾವಣೆಗಳ ಹೆಸರು, ನಕಾಶೆ, ಫ್ಲಾಟ್‍ಗಳ ಫೋಟೋ ಮತ್ತು ವೀಡಿಯೋ, ಫ್ಲಾಟ್‍ಗಳ ಸಂಖ್ಯೆ ಇವೆಲ್ಲವನ್ನೂ ವೀಕ್ಷಿಸಬಹುದು. ಫ್ಲಾಟ್‍ಗಳಿಗೆ ನಿಗದಿಪಡಿಸಿರುವ ದರಗಳಂತೆ ಆನ್‍ಲೈನ್ ಮೂಲಕವೇ ತಮಗಿಷ್ಟವಾದ ಫ್ಲಾಟ್‍ಗಳನ್ನು ಕಾಯ್ದಿರಿಸಬಹುದು.

ಬಿಡಿಎ ಅಧ್ಯಕ್ಷರು ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ, ವಸತಿ ಸಮುಚ್ಛಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆಗೊಳಿಸಿದ್ದಾರೆ ಹಾಗೂ ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಆಟದ ಮೈದಾನ, ಉದ್ಯಾನವನ, ಮಕ್ಕಳ ಆಟಿಕೆಗಳು, ಜಿಮ್, ವೆಲ್‍ಫೇರ್ ಅಸೋಸಿಯೇಷನ್‍ಗೆ ಕಚೇರಿ ನಿರ್ಮಿಸಲು ಸ್ಥಳ ಕಾಯ್ದಿರಿಸುವುದು, ವಸತಿ ಸಮುಚ್ಛಯಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *