ಮಂಗಳೂರು: ಕಡಲನಗರಿ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ. ಇಲ್ಲಿ ಅನ್ಯಕೋಮಿನ ಯುವಕ-ಯುವತಿಯರು ಒಟ್ಟೊಟ್ಟಿಗೆ ತಿರುಗಾಡಿದ್ರು ಅಂದ್ರೆ ಅಲ್ಲೊಂದು ರಾದ್ದಾಂತ ನಡೆದುಹೋಗುತ್ತೆ. ಇದೀಗ ಅಂತಹದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಸ್ಸಿನಲ್ಲಿ ರಾತ್ರಿ ಸಂಚಾರ ನಡೆಸುತ್ತಿದ್ದ ಭಿನ್ನ ಜೋಡಿಗೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ.
ಹೌದು. ಕಡಲನಗರಿ ಮಂಗಳೂರಿನಲ್ಲಿ ಇತ್ತೀಚಿನ ಕೆಲ ದಿನಗಳಿಂದ ಅನ್ಯಕೋಮಿನ ಯುವಕ-ಯುವತಿಯರ ಮೇಲೆ ಹಿಂದೂ ಸಂಘಟನೆಗಳ ದಾಳಿ ಪ್ರಕರಣ ಹೆಚ್ಚಾಗುತ್ತಿದೆ. ನಿನ್ನೆ ರಾತ್ರಿಯು ಸಹ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಇದ್ದ ಅನ್ಯಕೋಮಿನ ಜೋಡಿಯ ಮೇಲೆ ದಾಳಿ ಮಾಡಲಾಗಿದೆ. ನಗರದ ಪಂಪ್‍ವೆಲ್ ಬಳಿ ಯುವಕ-ಯುವತಿ ಚಲಿಸುತ್ತಿದ್ದ ಬಸ್ಸನ್ನು ಸಂಘಟನೆಯವರು ತಡೆದು ನಿಲ್ಲಿಸಿದ್ದಾರೆ. ಬಸ್ಸಿನಲ್ಲಿದ್ದ ಮಂಗಳೂರು ಮೂಲದ ಅನ್ಯಕೋಮಿನ ಯುವಕ-ಯುವತಿಯನ್ನು ಕೆಳಗಿಳಿಸಿ ಥಳಿಸಿದ್ದಾರೆ. ಈ ನಡುವೆ ಯುವಕನಿಗೆ ಆಯುಧವೊಂದರಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಯುವಕ-ಯುವತಿ ಮಂಗಳೂರಿನ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಸದ್ಯ ಕಾಲೇಜು ಶಿಕ್ಷಣ ಮುಗಿಸಿದ್ದರು ಕೆಲ ಸಮಯದಿಂದ ಮಂಗಳೂರಿನಲ್ಲಿ ತಿರುಗಾಡುತ್ತಿದ್ದರು. ಈ ಮಾಹಿತಿ ಹಿಂದೂ ಸಂಘಟನೆಗಳ ಗಮನಕ್ಕೆ ಬಂದಿತ್ತು. ನಿನ್ನೆ ಯುವತಿ ಕೆಲಸ ಅರಸಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದಳು. ತನ್ನ ಜೊತೆ ಸ್ನೇಹಿತ ಯುವಕ ಸಹಾಯಕ್ಕಾಗಿ ಬಂದಿದ್ದ ಎಂಬುದನ್ನು ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಯುವತಿಯ ದೂರಿನ ಹಿನ್ನಲೆಯಲ್ಲಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಕೆಲವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ಈ ರೀತಿಯ ಹಲವು ಪ್ರಕರಣ ನಡೆದಿದೆ. ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರುವಿನ ಕಲ್ಲು ಕೋರೆ ಬಳಿ ಅರೆಬೆತ್ತಲಾಗಿ ಕಾಣಿಸಿಕೊಂಡಿದ್ದ ಯುವಕ ಯುವತಿಯರನ್ನು ಥಳಿಸಿ ಬಜಪೆ ಪೊಲೀಸರಿಗೆ ಸಂಘಟನೆ ಸದಸ್ಯರು ನೀಡಿದ್ದರು.
ಸದ್ಯ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಏನೇ ಇದ್ರು ಕಾನೂನನ್ನು ಕೈಗೆತ್ತಿಗೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂಬುದು ಸ್ಪಷ್ಟ. ಏನೇ ಘಟನೆಗಳಾದರೂ ಕಾನೂನು ಕ್ರಮದ ಮೂಲಕವೇ ಮುಂದುವರಿಯಬೇಕಾಗುತ್ತದೆ.