ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

Public TV
2 Min Read

– ಶ್ರಮಿಕ್ ರೈಲು ಮೂಲಕ ಬಿಹಾರಿನತ್ತ 1,452 ವಲಸಿಗರು

– ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟ ಜಿಲ್ಲಾಡಳಿತ

– ಭಾವುಕರಾದ ವಲಸೆ ಕಾರ್ಮಿಕರು

ಬಳ್ಳಾರಿ: ಶ್ರಮಿಕ್ ವಿಶೇಷ ರೈಲಿನ ಮೂಲಕ 1,452 ಜನ ಬಿಹಾರಿ ವಲಸೆ ಕಾರ್ಮಿಕರು ತಮ್ಮ ತವರಿನತ್ತ ತೆರಳಿದರು. ಸುರಕ್ಷಿತವಾಗಿ ಊರು ತಲುಪಿ ಮತ್ತೆ ಬಳ್ಳಾರಿಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್‍ಪಿ ಸಿ.ಕೆ.ಬಾಬಾ, ಜಿ.ಪಂ. ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಶುಭಹಾರೈಸಿ ಬೀಳ್ಕೊಟ್ಟರು.

ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣ ಪತ್ರ ವಿತರಿಸಿ ಹಾಗೂ ಅಲ್ಲಿಯೇ 840 ರೂ.ಗಳ ಟಿಕೆಟ್ ನೀಡಿ ಬಸ್‍ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ತಲುಪಿಸಲಾಯಿತು. ಅಲ್ಲದೆ ಅವರಿಗೆ ನೀಡಲಾದ ಟಿಕೆಟ್, ಹಿಂಬದಿ ಬರೆದಿದ್ದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ವ್ಯವಸ್ಥಿತವಾಗಿ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟರು.

ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದುದ್ದೇಶದಿಂದ ಪ್ರತಿಯೊಬ್ಬರಿಗೂ ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.

ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯವರು ಮಾಸ್ಕ್ ಗಳನ್ನು ವಿತರಿಸಿದರು. ಈ ಎಲ್ಲ ಆತಿಥ್ಯವನ್ನು ನೋಡಿದ ವಲಸೆ ಕಾರ್ಮಿಕರು ಭಾವುಕರಾಗಿ ಸಂತಸದಿಂದ ಸಿಬ್ಬಂದಿಯತ್ತ ಕೈ ಬೀಸಿದರು.

ರೈಲು ನಿಲ್ದಾಣದಲ್ಲಿನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಈ ರೈಲು ಬಿಹಾರದ ಸಹಸ್ರಾಗೆ ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯಾಗಿರಲಿದೆ. ಮಾರ್ಗ ಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು.

ಈಗ ಒಂದು ರೈಲು ಬಿಹಾರಕ್ಕೆ ತೆರಳುತ್ತಿದ್ದು, ಇನ್ನೂ ಹೆಚ್ಚಿನ ವಲಸಿಗರು ಬಿಹಾರಕ್ಕೆ ತೆರಳುವುದಾದರೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಉತ್ತರ ಪ್ರದೇಶಕ್ಕೆ ಎರಡು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 10ಕ್ಕೆ ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣದ ಮೂಲಕ ಉತ್ತರ ಪ್ರದೇಶದ ವಲಸಿಗರು ತೆರಳಲಿದ್ದಾರೆ. ಈಗಾಗಲೇ ಅವರೆಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಟಿಕೆಟ್ ಸಹ ನೀಡಲಾಗಿದೆ ಎಂದು ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *