ಬಲವಂತ ಮಾಡ್ಬೇಡಿ, ಮತ್ತೆ ಲಾಕ್‌ಡೌನ್‌ ವಿಸ್ತರಿಸಲ್ಲ: ಸಿಎಂ ಸಭೆಯ ಇನ್‌ಸೈಡ್‌ ಸ್ಟೋರಿ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಅಂಕೆಗೆ ಸಿಗದ ಕೊರೊನಾಗೆ ಲಾಕ್‍ಡೌನ್ ವಿಸ್ತರಣೆ ಮಾಡುವ ಮೂಲಕ ಮೂಗುದಾರ ಹಾಕಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ  ಯಾವುದೇ ಕಾರಣಕ್ಕೂ ಲಾಕ್‍ಡೌನ್ ವಿಸ್ತರಣೆ ಮಾಡದಿರಲು ಸಿಎಂ ಬಿಎಸ್‍ವೈ ತೀರ್ಮಾನಿಸಿದ್ದಾರೆ.

ಇಂದು ಬೆಂಗಳೂರಿನ ಕೊರೊನಾಪರಿಸ್ಥಿತಿ ಮತ್ತು ನಿರ್ವಹಣೆ ಕುರಿತು ಅಷ್ಟ ದಿಕ್ಪಾಲಕರ ಜೊತೆಗಿನ ಸಭೆಯಲ್ಲಿ ಆರ್ಥಿಕತೆಯ ಕಾರಣ ನೀಡಿದ ಸಿಎಂ, ಲಾಕ್‍ಡೌನ್ ಮುಂದುವರಿಸುವ ಪ್ರಶ್ನೆಯೇ ಇಲ್ಲ. ಯಾರೂ ಬಲವಂತ ಮಾಡಬೇಡಿ. ಜುಲೈ 22ರ ಮುಂಜಾನೆ ಐದು ಗಂಟೆಗೆ ಮುಗಿದುಹೋಗ್ಬೇಕು ಎಂದು ಸಚಿವರಿಗೆ ಖಡಕ್ ಆಗಿ ತಿಳಿಸಿದ್ದಾರೆ.

ಸಿಎಂ ಸಭೆ ಬಳಿಕ ಮಾತನಾಡಿದ ಕಂದಾಯ ಮಂತ್ರಿ ಅಶೋಕ್, ಲಾಕ್‍ಡೌನ್ ಮುಂದುವರೆಯಲ್ಲ, ಲಾಕ್‍ಡೌನ್ ಮುಂದುವರೆಯಲ್ಲ, ಲಾಕ್‍ಡೌನ್ ಮುಂದುವರೆಯಲ್ಲ ಅಂತಾ ಮೂರು ಬಾರಿ ಒತ್ತಿ ಹೇಳಿದರು. ಲಾಕ್‍ಡೌನ್‍ನಿಂದ ಕೊರೋನಾ ಸೋಂಕನ್ನು ಕೆಲವು ದಿನ ಮುಂದೂಡಬಹುದು ಅಷ್ಟೇ ಎಂದರು. ಡಿಸಿಎಂ ಅಶ್ವಥ್ ನಾರಾಯಣ್ ಸಹ, ಲಾಕ್‍ಡೌನ್ ಮುಂದುವರಿಸಲ್ಲ ಅಂತಾ ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಅಂತಾ ತಿಳಿಸಿದರು.

ಸಭೆಯಲ್ಲಿ ಏನಾಯ್ತು?
ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಅಪಾಯಕಾರಿ ಪರಿಸ್ಥಿತಿ ನಿರ್ಮಾಣ ಆಗಿದೆ. ಕನಿಷ್ಠ ಪಕ್ಷ ಇನ್ನೊಂದು ವಾರವಾದರೂ ಲಾಕ್‍ಡೌನ್ ಮುಂದುವರಿಸಿ ಎಂದು ಕೆಲ ನಾಯಕರು ಸಭೆಯಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಬೆಂಗಳೂರಿನ ಎಲ್ಲಾ ಕಡೆ ಲಾಕ್‍ಡೌನ್ ಮಾಡಲು ಆಗದಿದ್ರೆ ಹಾಟ್‍ಸ್ಪಾಟ್‍ಗಳಲ್ಲಾದ್ರೂ ಲಾಕ್‍ಡೌನ್ ಮಾಡ್ಬೇಕು ಅಂತಾ ಅಭಿಪ್ರಾಯ ಮಂಡಿಸಿದ್ದಾರೆ.

ಈ ವೇಳೆ ಲಾಕ್‍ಡೌನ್ ಮುಂದುವರಿಕೆಗೆ ಒಲವು ತೋರದ ಸಿಎಂ, ಹಾಟ್‍ಸ್ಪಾಟ್‍ಗಳಲ್ಲಿ ಬೇಕಿದ್ದರೆ ಇನ್ನಷ್ಟು ಪೊಲೀಸ್ ಭದ್ರತೆ ಹೆಚ್ಚಿಸೋಣ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಲ್ಲಿಯ ತನಕ ಗೊಂದಲ ಸೃಷ್ಟಿಸಬೇಡಿ ಎಂದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಇದೇ ವೇಳೆ, ಸೋಂಕಿತರಿಗೆ ಸರಿಯಾದ ಚಿಕಿತ್ಸೆ, ಬೆಡ್ ವ್ಯವಸ್ಥೆ, ಅಂಬುಲೆನ್ಸ್‌ ಇನ್ನೂ ಆಗದೇ ಇರುವುದಕ್ಕೆ ಸಿಟ್ಟಾಗಿದ್ದಾರೆ. ಆಗಲೇ ಮೂರು ದಿನ ಆಗೋಯ್ತು. ಇನ್ಯಾವಾಗ ಎಲ್ಲವನ್ನು ಸರಿ ಮಾಡ್ಕೊಳ್ಳೋದು ಅಂತಾ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕೊರೊನಾ ತಡೆಗೆ ಕೆಲವೊಂದು ಸಲಹೆ ನೀಡಿ, ಇವು ಕೂಡಲೇ ಜಾರಿ ಜಾರಿಗೆ ಬರಬೇಕು ಅಂತಾ ಆದೇಶ ನೀಡಿದ್ದಾರೆ.

ಕೊರೋನಾ ತಡೆಗೆ ಸಿಎಂ ಮಂತ್ರ:
* ಸದ್ಯಕ್ಕೆ ಲಾಕ್‍ಡೌನ್ ವಿಸ್ತರಣೆ ಮಾಡುವುದಿಲ್ಲ
* ಮೊದಲು ಆಸ್ಪತ್ರೆಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ
* ಕೊರೊನೇತರ ರೋಗಿಗಳಿಗೆ ಚಿಕಿತ್ಸೆ ಸಿಗುವಂತೆ ಮಾಡಬೇಕು
* ರೋಗ ಲಕ್ಷಣ ಇಲ್ಲದವರನ್ನ ಆಸ್ಪತ್ರೆ ಬದಲು ಕೇರ್ ಸೆಂಟರ್‌ಗೆ ಕಳುಹಿಸಿ
* ತೀವ್ರ ರೋಗ ಲಕ್ಷಣ ಇರುವವರಿಗೆ ಮಾತ್ರ ಆಸ್ಪತ್ರೆ ವ್ಯವಸ್ಥೆ ಮಾಡಿ


* ಆಸ್ಪತ್ರೆಯಲ್ಲಿ ಮೃತರಾದವರಿಗೆ ಆಂಟಿಜೆನ್ ಟೆಸ್ಟ್ ನಡೆಸಿ ಕೂಡಲೇ ದೇಹ ಹಸ್ತಾಂತರಿಸಬೇಕು
* ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು.
* ನಾಳೆಯೇ ಮತ್ತಷ್ಟು ಆಂಬುಲೆನ್ಸ್ ಖರೀದಿಸಿ (500 ಆಂಬುಲೆನ್ಸ್)
* ಪ್ರತಿ ವಾರ್ಡ್‍ನಲ್ಲಿ ಸ್ವಯಂ ಸೇವಕರು, ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿ
* ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಪರಿಶೀಲನೆಗೆ ನೋಡಲ್ ಅಧಿಕಾರಿಗಳನ್ನ ನೇಮಿಸಬೇಕು
* ಪ್ರತಿ ವಾರ್ಡ್‍ನ ಕಲ್ಯಾಣ ಮಂಟಪಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿ
* ವಲಯಗಳಲ್ಲಿ ಸಮಸ್ಯೆಯಾದ್ರೆ ಆಯಾ ಉಸ್ತುವಾರಿ ಸಚಿವರೇ ಹೊಣೆ

Share This Article
Leave a Comment

Leave a Reply

Your email address will not be published. Required fields are marked *