ಬರೋಬ್ಬರಿ 8 ವರ್ಷಗಳ ಬಳಿಕ ಗಂಡು ಮಗು ಜನನ- ಗ್ರಾಮದ ಜನಸಂಖ್ಯೆ 29ಕ್ಕೆ ಏರಿಕೆ

Public TV
2 Min Read

– ಹಬ್ಬದ ವಾತಾವರಣದಲ್ಲಿ ಹಳ್ಳಿಯ ಜನ

ರೋಮ್: ಅತೀ ಕಡಿಮೆ ಜನಸಂಖ್ಯೆ ಇರುವ ಇಟಲಿಯ ಪುಟ್ಟ ಗ್ರಾಮವೊಂದರ ಮನೆಯಲ್ಲಿ ಗಂಡು ಮಗುವಿನ ಜನನವಾಗಿದೆ. ಈ ಮೂಲಕ ಬರೋಬ್ಬರಿ 8 ವರ್ಷದ ಬಳಿಕ ಮಗು ಹುಟ್ಟಿದ್ದು, ಹೀಗಾಗಿ ಗ್ರಾಮದ ಜನ ಅದ್ಧೂರಿಯಾಗಿ ಶಿಶುವನ್ನು ಸ್ವಾಗತಿಸಿದ್ದಾರೆ.

ಲೊಂಬಾರ್ಡಿಯ ಮೌಂಟೇನಿಯಸ್ ಸಮುದಾಯದ ಮೊರ್ಟೆರೋನ್ ನಲ್ಲಿ ಗಂಡು ಮಗು ಜನನದ ಬಳಿಕ ಅಲ್ಲಿನ ಜನಸಂಖ್ಯೆ 29ಕ್ಕೆ ಏರಿಕೆಯಾಯಿತು. ಮಗುವಿಗೆ ಡೇನಿಸ್ ಎಂದು ನಾಮಕರಣ ಕೂಡ ಮಾಡಲಾಗಿದೆ.

ಗಂಡು ಮಗು ಹುಟ್ಟಿದ್ದೇ ತಡ ಇಡೀ ಸಮುದಾಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಎಂದು ಮೊರ್ಟೆರೋನ್ ಮೇಯರ್ ಇನ್ವರ್ನಿಜಿ ತಿಳಿಸಿದ್ದಾರೆ.

ಡೇನಿಸ್ ತಂದೆ ಮ್ಯಾಟಿಯೊ ಹಾಗೂ ತಾಯಿ ಸಾರಾ ತಮಗೆ ಗಂಡು ಮಗು ಹುಟ್ಟಿರುವ ವಿಚಾರವನ್ನು ಇಟಾಲಿಯನ್ ಸಂಪ್ರದಾಯದಂತೆ ಘೋಷಣೆ ಮಾಡಿದ್ದಾರೆ. ನೀಲಿ ಬಣ್ಣ ಅಂದ್ರೆ ಗಂಡು, ಪಿಂಕ್ ಬಣ್ಣ ಅಂದ್ರೆ ಹುಡುಗಿ ಎಂದು ಸಾಮಾನ್ಯವಾಗಿ ಗ್ರಹಿಸಲಾಗುತ್ತದೆ. ಅಂತೆಯೇ ಡೇನಿಸ್ ತಂದೆ- ತಾಯಿ ಮನೆ ಬಾಗಿಲಿಗೆ ನೀಲಿ ಬಣ್ಣದ ರಿಬ್ಬನ್ ಕಟ್ಟುವ ಮೂಲಕ ಗಂಡು ಮಗುವಾಗಿರುವ ವಿಚಾರ ತಿಳಿಸಿದ್ದಾರೆ.

2012ರಲ್ಲಿ ಹೆಣ್ಣು ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ಹಳ್ಳಿಯಲ್ಲಿ ರಿಬ್ಬನ್ ಕಂಡು ಬಂದಿರುವುದಾಗಿದೆ. ಲೆಕ್ಕೊದ ಅಲೆಸ್ಸಾಂಡ್ರೊ ಮಂಜೋನಿ ಆಸ್ಪತ್ರೆಯಲ್ಲಿ ಡೇನಿಸ್ ಜನನವಾಗಿದ್ದು, ಹುಟ್ಟಿದಾಗ ಈತ 2.6 ಕೆ.ಜಿ ಇದ್ದನು.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಸಾರಾ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಸಮಯದಲ್ಲಿಯೇ ಗರ್ಭಿಣಿಯಾಗಿದ್ದು, ನನಗೆ ಭಾರೀ ಸವಾಲಾಗಿತ್ತು. ಮೊರ್ಟೆರೋನ್ ಬಿಟ್ಟು ಲೊಂಬಾರ್ಡಿ ಪ್ರದೇಶದಲ್ಲಿ ಕೋವಿಡ್ 19 ತನ್ನ ಅಟ್ಟಹಾಸ ಮೆರೆದಿತ್ತು. ಹೀಗಾಗಿ ನಾನು ತುಂಬಾ ಆತಂಕಕ್ಕೀಡಾಗಿದ್ದೆ. ಇಂತಹ ಸಮಯದಲ್ಲಿ ಹೊರಗಡೆ ಹೋಗಲು ಸಾಧ್ಯವಗುತ್ತಿರಲಿಲ್ಲ. ಅಲ್ಲದೆ ಪ್ರೀತಿ ಪಾತ್ರರನ್ನು ಭೇಟಿಯಾಗಲು ಕೂಡ ಅಸಾಧ್ಯವಾಗಿತ್ತು ಎಂದು ತಿಳಿಸಿದ್ದಾರೆ.

ತಮಗೆ ಗಂಡು ಮಗು ಹುಟ್ಟಿದ ಖುಷಿಗಾಗಿ ಆಸ್ಪತ್ರೆಯಿಂದ ತೆರಳಿ ಇಡೀ ಕುಟುಂಬಕ್ಕೆ ಭರ್ಜರಿ ಪಾರ್ಟಿ ನೀಡಲು ತೀರ್ಮಾನಿಸಿದ್ದೇವೆ. ಈ ಪಾರ್ಟಿಗೆ ಎಲ್ಲರನ್ನೂ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಡೆನಿಸ್ ಜನಿಸುವ ಕೆಲ ವಾರಗಳ ಮೊದಲು ಇಟಲಿಯ ಜನನ ಪ್ರಮಾಣ 2019ರಲ್ಲಿ ದಾಖಲೆಯ ಕನಿಷ್ಟ ಮಟ್ಟವನ್ನು ತಲುಪಿದೆ ಎಂದು ಹೇಳಲಾಗಿತ್ತು. 1862ರಲ್ಲಿ ದಾಖಲೆಗಳು ಪ್ರಾರಂಭವಾದ ಬಳಿಕ ಇದೇ ಮೊದಲು ಅತ್ಯಂತ ಕಡಿಮೆ ಜನನ ಪ್ರಮಾಣ ಹೊಂದಿರುವುದಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಮೊರ್ಟೆರೋನ್ ಅನ್ನು ಇಟಲಿಯ ಅತ್ಯಂತ ಚಿಕ್ಕ ಪುರಸಭೆ ಎಂದು ವರ್ಗೀಕರಿಸಲಾಗಿದೆ. ಇತ್ತೀಚೆಗೆ ಮೇಯರ್ ತಂದೆ ನಿಧನರಾಗಿದ್ದು, ಆ ಬಳಿಕ ಜನಸಂಖ್ಯೆ 28ಕ್ಕೆ ಕುಸಿದಿತ್ತು.

ಪ್ರಸ್ತುತ ನಮ್ಮ ಜನಸಂಖ್ಯೆ 29ಕ್ಕೆ ಏರಿಕೆಯಾಗಿದೆ. ನನ್ನ ಪ್ರಕಾರ ಸದ್ಯ ಯಾರೂ ಗರ್ಭಿಣಿಯರು ಇಲ್ಲ. ಆದರೆ ಇದೀಗ ಗಂಡು ಮಗು ಜನಿಸಿರುವುದು ನಮಗೆ ತುಂಬಾ ಖುಷಿ ತಂದಿದೆ ಎಂದು ಇನ್ವರ್ನಿಜಿ ಖುಷಿ ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *