ಬನಶಂಕರಿಯಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ನಟಿ ಜಯಂತಿ ಅಂತ್ಯಕ್ರಿಯೆ

Public TV
2 Min Read

ಬೆಂಗಳೂರು: ಚಂದನವನದ ಹಿರಿಯ ನಟಿ, ಪಂಚಭಾಷೆ ತಾರೆ, ಅಭಿನಯ ಶಾರದೆ 76 ವರ್ಷದ ಜಯಂತಿ ಅವರು ದೀರ್ಘಕಾಲೀನ ಅನಾರೋಗ್ಯದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ಬನಶಂಕರಿ ಚಿತಾಗಾರದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಿತು.

ಜಯಂತಿ ನಿಧನದಿಂದ ದಕ್ಷಿಣ ಭಾರತೀಯ ಚಿತ್ರೋದ್ಯಮ ಆಘಾತಕ್ಕೆ ಒಳಗಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರೋದ್ಯಮದ ಗಣ್ಯರು ಕಂಬನಿ ಮಿಡಿದಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವರು ಸಂತಾಪ ಸೂಚಿಸಿದ್ದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೆಲಕಾಲ ಜಯಂತಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಚಿವ ಯೋಗೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಿರಿಯ ನಟಿ ಭಾರತಿ, ಜಯಮಾಲಾ, ಹೇಮಾಚೌಧರಿ, ಸುಧಾರಾಣಿ, ಪುನಿತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: ಮೋಸವಾಗಿತ್ತು, ಹಸಿ ಹಸಿಯಾಗಿ ಬಲಿಯಾದರು: ಪತ್ರಕರ್ತ ಗಣಪತಿ

ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶ್ರೀನಾಥ್, ಶಿವಾಜಿ ಗಣೇಶನ್, ಎಂಜಿಆರ್, ರಜಿನಿಕಾಂತ್, ಎನ್‍ಟಿಆರ್, ಎಎನ್‍ಆರ್‍ರಂತಹ ಮೇರು ನಟರೊಂದಿಗೆ ಜಯಂತಿ ನಟಿಸಿದ್ದರು. ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಬಾಲನಟಿಯಾಗಿ ಮೊದಲ ಬಾರಿಗೆ ತೆಲುಗಿನ ಜಗದೇಕವೀರುನಿ ಕಥಾ ಸಿನಿಮಾಗೂ ಬಣ್ಣ ಹಚ್ಚಿದ್ದರು. ನಾಯಕಿಯಾಗಿ ಜೇನುಗೂಡು ಸಿನಿಮಾದಲ್ಲಿ ಜಯಂತಿಗೆ ಅವಕಾಶ ಸಿಕ್ಕಿತ್ತು. ನಿರ್ದೇಶಕ ವೈಆರ್ ಸ್ವಾಮಿ ಕಮಲಾಕುಮಾರಿಯನ್ನು ಜಯಂತಿ ಎಂದು ಕರೆದರು. ಕೊನೆಗೆ ಅದೇ ಹೆಸರಿಂದ ಫೇಮಸ್ ಆದ್ರು. ಬಹದ್ದೂರ್ ಗಂಡು, ಎಡಕಲ್ಲುಗುಡ್ಡದ ಮೇಲೆ, ಮಿಸ್ ಲೀಲಾವತಿ, ಕಸ್ತೂರಿ ನಿವಾಸ, ಎಡಕಲ್ಲು ಗುಡ್ಡದ ಮೇಲೆ, ಪರೋಪಕಾರಿ, ಶ್ರೀಕೃಷ್ಣದೇವರಾಯ, ನಾಗರಹಾವು ಸೇರಿದಂತೆ ಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದರು. ನಟಿಯಾಗಿ ಮಾತ್ರವಲ್ಲದೇ, ನಿರ್ದೇಶಕಿಯಾಗಿ, ನಿರ್ಮಾಪಕಿ ಕೂಡ ಆಗಿ ಕೂಡ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು, ನಟನೆಗಾಗಿ ಎರಡು ಬಾರಿ ರಾಷ್ಟ್ರಪತಿ ಪದಕ ಪಡೆದಿದ್ರು. ರಾಜಕೀಯಕ್ಕೆ ಎಂಟ್ರಿ ಕೊಟ್ರೂ ಜಯಂತಿ ಯಶಸ್ಸು ಕಂಡಿರಲಿಲ್ಲ. 1998ರ ಲೋಕಸಭೆ ಚುನಾವಣೆ, 1999ರಲ್ಲಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿ ಸೋಲನ್ನಪ್ಪಿದ್ದರು.

ಇಂದು ಸಂಜೆ ಬನಶಂಕರಿ ಚಿತಾಗಾರದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ಜಯಂತಿ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ ನೇತ್ರದಾನ ಮಾಡಲಾಯ್ತು. ಬದುಕಿದ್ದಷ್ಟೂ ವರ್ಷ ಅಪಾರ ಸ್ನೇಹಿತರನ್ನ ಕಟ್ಟಿಕೊಂಡು. ನೋವು ನುಂಗಿಕೊಂಡು ಪ್ರೀತಿ ಹಂಚಿಕೊಂಡು ಬದುಕಿದ ನಿಜವಾದ ಸ್ಟಾರ್ ನಟಿ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ಮಣ್ಣಿಗೆ ಸೇರಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ನಟಿಯ ಕಣ್ಣುಗಳು ದಾನದ ರೂಪದಲ್ಲಿ ಹೋಗಿ ಓರ್ವನ ಜೀವಕ್ಕೆ ಬೆಳಕುಕೊಟ್ಟಿದೆ. ಇದನ್ನೂ ಓದಿ: ವೈದ್ಯರು ಬದುಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

Share This Article
Leave a Comment

Leave a Reply

Your email address will not be published. Required fields are marked *