ಬಣ್ಣ ಕಾಣದ ಸರ್ಕಾರಿ ಶಾಲೆಗೆ ಹೋಳಿ ಹಬ್ಬದ ರಂಗು ಹಚ್ಚಿದ ಹಳೆಯ ವಿದ್ಯಾರ್ಥಿಗಳು

Public TV
2 Min Read

– ವಿಭಿನ್ನ ರೀತಿಯಲ್ಲಿ ಹೋಳಿ ಆಚರಿಸಿದ ರಾಯಚೂರಿನ ಯುವಕರು
– ಶ್ರಮದಾನ ಮೂಲಕ ಶಾಲೆಗೆ ಹೊಸ ರೂಪ, ಸಸಿ ನೆಟ್ಟು ಸಂಭ್ರಮ
– 10 ಬ್ಯಾಚ್ ವಿದ್ಯಾರ್ಥಿಗಳಿಂದ ಶಾಲೆಯ ಅಭಿವೃದ್ಧಿಗೆ ಪಣ

ರಾಯಚೂರು: ರಂಗಿನ ಹಬ್ಬ ಹೋಳಿ ಆಚರಿಸಲು ಈ ಬಾರಿ ಕೊರೊನಾ ತಡೆಯಾಗಿದೆ. ಕೊರೊನಾ ಎರಡನೇ ಅಲೆ ಬೀಸುತ್ತಿರುವುದರಿಂದಾಗಿ ಈ ಬಾರಿ ಸಾರ್ವಜನಿಕವಾಗಿ ಯಾರೂ ಹೋಳಿ ಆಡದಂತೆ ಮಾಡಿದೆ. ಆದರೆ ರಾಯಚೂರಿನ ಯುವಕರ ಗುಂಪೊಂದು ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವ ಮೂಲಕ ಎಲ್ಲರಿಗೂ ಮಾದರಿಯಾಗುವಂತೆ ಹೋಳಿ ಹಬ್ಬವನ್ನು ಆಚರಿಸಿದೆ.

ನಗರದ ಜವಾಹನಗರದ ಕಲ್ಲೂರು ಸರಾಫ್ ಶೀನಯ್ಯ ಬಾಲರಾಜ್ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಸರ್ಕಾರಿ ಅನುದಾನಿತ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡ ಬಣ್ಣವನ್ನು ಕಂಡು 15 ರಿಂದ 20 ವರ್ಷವೇ ಕಳೆದಿತ್ತು. ಶಾಲೆಯ ಕಟ್ಟಡ ಸಹ ಅಲ್ಲಲ್ಲಿ ಶಿಥಿಲಗೊಂಡಿತ್ತು. ಇದನ್ನು ಕಂಡ ಈ ಶಾಲೆಯ 1998ರ ಬ್ಯಾಚ್‍ನ ಹಳೆಯ ವಿದ್ಯಾರ್ಥಿ ರಂಗಾರಾವ್ ದೇಸಾಯಿ ತನ್ನ ಸಹಪಾಠಿಗಳ ಸಹಾಯದಿಂದ ಶಾಲೆಗೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಹೋಳಿ ಹಬ್ಬವನ್ನು ಒಬ್ಬರಿಗೊಬ್ಬರು ಬಣ್ಣ ಎರಚಿ ಆಡುವುದಕ್ಕಿಂತ, ತಾವು ಓದಿದ ಶಾಲೆಗೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಈ ಮೂಲಕ ತಮ್ಮ ಬಾಲ್ಯದ ಹಳೆಯ ನೆನಪುಗಳಿಗೆ ರಂಗಿನ ಮೂಲಕ ಹೊಸ ಜೀವ ತುಂಬಿದ್ದಾರೆ.

ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲೂ ಕಾಳಜಿ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಜೀವ ಕಳೆ ತುಂಬಿದ್ದಾರೆ. 1969 ರಲ್ಲಿ ಆರಂಭವಾದ ಈ ಶಾಲೆ 51 ವರ್ಷಗಳನ್ನ ಪೂರೈಸಿದೆ. ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿದ್ದಾರೆ. ಅಮೆರಿಕ, ಕೆನಡಾ, ಬ್ರೆಜಿಲ್, ಮಲೇಷ್ಯಾ, ಸೇರಿ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಶಾಲೆ ಮಾತ್ರ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತ ಬಂದಿತ್ತು. ಇದನ್ನು ಗಮನಿಸಿದ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಸೇರಿ ಹೋಳಿ ಹಬ್ಬ ನಿಮಿತ್ತ ಶಾಲೆಗೆ ಹೊಸ ರೂಪ ನೀಡಿದ್ದಾರೆ.

ಸಾಧ್ಯವಾಗಿದ್ದು ಹೇಗೆ?
ಬ್ರೆಜಿಲ್‍ನಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿ ರಂಗಾರಾವ್ ವರ್ಕ್ ಫ್ರಂ ಹೋಂ ಹಿನ್ನೆಲೆ ರಾಯಚೂರಿನಲ್ಲೆ ಇದ್ದು ಶಾಲೆಯ ಫೋಟೋ ತೆಗೆದು ಸ್ನೇಹಿತರಿಗೆ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಾಲೆಯ ಫೋಟೋವನ್ನು ಶೇರ್ ಮಾಡಿದ ಕೂಡಲೇ ಸುಮಾರು 10 ಬ್ಯಾಚ್‍ನ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಒಂದೆಡೆ ಶಾಲೆಯನ್ನು ತುಂಬಾ ವರ್ಷಗಳ ನಂತರ ನೋಡಿದ ಖುಷಿಯಿದ್ದರೆ, ಇನ್ನೊಂಡೆ ಶಾಲೆ ಕಳೆ ಹೀನವಾಗಿದ್ದಕ್ಕೆ ಬೇಸರಗೊಂಡಿದ್ದಾರೆ. ಸದ್ಯ ಶಾಲೆಗೆ ಬಣ್ಣಗಳಿಂದ ಅಲಂಕಾರ ಮಾಡಿ, ಶ್ರಮದಾನ ಮೂಲಕ ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟಿದ್ದಾರೆ. ಮುಂದೆ ಸಹ ಶಾಲೆಯ ಕುಂದುಕೊರತೆಗಳನ್ನು ಅರಿತು ಶಾಲಾ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ. ಇದರಿಂದ ಶಾಲೆಯ ಶಿಕ್ಷಕರು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *