ಬಡವರ ಅಕ್ಕಿಗೆ ಕತ್ತರಿ ಹಾಕಿದರೆ ಕ್ರಿಮಿನಲ್ ಕೇಸ್, ಲೈಸೆನ್ಸ್ ರದ್ದು- ಕತ್ತಿ ಎಚ್ಚರಿಕೆ

Public TV
1 Min Read

ಚಿಕ್ಕೋಡಿ/ಬೆಳಗಾವಿ: ಬಡವರ ಅಕ್ಕಿಗೆ ಕತ್ತರಿ ಹಾಕಿದರೆ ಪಡಿತರ ಅಂಗಡಿಕಾರರ ವಿರುದ್ಧ ಕ್ರಿಮಿನಲ್ ಪ್ರಕರಣದ ಜೊತೆಗೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪೊಲಿಸರು ಆಯೋಜಿಸಿದ್ದ ಕೊರೊನಾ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಪಡಿತರ ಅಂಗಡಿಗಳಲ್ಲಿ ಕಾರ್ಡುದಾರರಿಗೆ ಅಕ್ಕಿ ಕಡಿಮೆ ನೀಡುವ ವಿಚಾರವಾಗಿ ಎಲ್ಲ ಜಿಲ್ಲೆಗಳಲ್ಲೂ ವೀಚಕ್ಷಣಾ ದಳದಿಂದ ನಿಗಾ ಇರಿಸಲಾಗಿದೆ. ಬಡವರಿಗೆ ಅಕ್ಕಿ ಮುಟ್ಟಿಸುವುದು ಸರ್ಕಾರದ ಆದ್ಯತೆಯಾಗಿದೆ. ಕೊವಿಡ್ ಸಂದರ್ಭದಲ್ಲಿ ಅಕ್ಕಿ ಕಳ್ಳ ಸಾಗಾಟ ಆಗಬಾರದು. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಯಾರೇ ಇರಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಿಗೆ ಜಿಲ್ಲಾಧಿಕಾರಿಗಳ ಸಭೆ ನಡೆಸುವ ಅವಕಾಶ ಇದೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಹಾಗೆ ಸಭೆ ಮಾಡಲು ಆಗುವುದಿಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯಲಿ. ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡಲಿ. ರಾಜಕೀಯ ಮಾಡುವುದನ್ನು ಬಿಟ್ಟು ಕೋವಿಡ್ ಮಹಾಮಾರಿ ವಿರುದ್ಧ ಎಲ್ಲರೂ ಸೇರಿ ಹೋರಾಡಬೇಕಿದೆ ಎಂದರು.

ಲಾಕ್‍ಡೌನ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ತಜ್ಞರೊಂದಿಗೆ ಸಭೆ ನಡೆಸುತ್ತಿದ್ದು, ಈ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವದು ಎಂದರು. ಈ ವೇಳೆ ಹುಕ್ಕೇರಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ಸಿಪಿಐ ರಮೇಶ್ ಛಾಯಾಗೋಳ, ಡಿವೈಎಸ್‍ಪಿ ಜಾವೇದ, ಹುಕ್ಕೇರಿ ಪಿಎಸ್‍ಐ ಸಿದ್ದರಾಮಪ್ಪ ಉನ್ನದ, ಸಂಕೇಶ್ವರ ಪಿಎಸ್‍ಐ ಗಣಪತಿ ಕುಗನೊಳ್ಳಿ, ಮುಖ್ಯಾಧಿಕಾರಿ ಮೋಹನ್ ಜಾಧವ್, ಮೋಹನ್ ದಂಡಿನ, ಭೀಮಪ್ಪ ಲಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *