Exclusive – ಬಡವರಿಗೆ ತಲುಪಬೇಕಾದ ರೇಷನ್ ಕಿಟ್‌ಗಳು ದೇವಸ್ಥಾನದಲ್ಲಿ ಅಕ್ರಮ ದಾಸ್ತಾನು

Public TV
1 Min Read

– ಬಡವರ ಹಸಿವು ನೀಗಿಸಬೇಕಿದ್ದ ಆಹಾರ ಕಿಟ್‍ಗಳ ಕಥೆ
– ಲಾಕ್‌ಡೌನ್‌ ಸಮಯದಲ್ಲಿ ವಿತರಣೆಯಾಗಬೇಕಿದ್ದ ಕಿಟ್‌ಗಳು
– ಅಕ್ರಮವಾಗಿ ಸಂಗ್ರಹಿಸಿಟ್ಟ ಆಹಾರ ಇಲಾಖೆ, ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿಯಿಂದ ಕೊರೊನಾ ಸಮಯದಲ್ಲಿ ಬಡವರಿಗೆ ಹಂಚುವಂತೆ ಕೊಟ್ಟಿದ್ದ ಅತ್ಯಾವಶ್ಯಕ ದಿನಸಿ ಕಿಟ್‌ಗಳು ದೇವಾಲಯದ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಕೊಡಿಗೆಹಳ್ಳಿಯ ಗುಂಡಾಂಜನೇಯ ದೇವಸ್ಥಾನದ ಆವರಣದಲ್ಲಿ 8 ಸಾವಿರ ಅತ್ಯಾವಶ್ಯಕ ದಿನಸಿ ಕಿಟ್‌ಗಳನ್ನು ಸಂಗ್ರಹಿಸಿಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಇಷ್ಟೊಂದು ಪ್ರಮಾಣದ ಕಿಟ್‌ ಸಂಗ್ರಹ ಮಾಡಿದ್ದು ಯಾಕೆ? ಕೋವಿಡ್ ಸಮಯದಲ್ಲಿ ಬಡವರಿಗೆ ತಲುಪಬೇಕಾದ ರೇಷನ್ ಕಿಟ್‌ಗಳನ್ನು ಈಗ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

ಯಲಹಂಕ ಮತ್ತು ಕೊಡಿಗೆಹಳ್ಳಿಯ ಬಿಬಿಎಂಪಿ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಜನರಿಗೆ ಈ ಕಿಟ್ ನೀಡದೇ, ಗುಂಡಾಂಜನೇಯ ದೇವಸ್ಥಾನದ ಆವರಣದಲ್ಲಿ ಯಾರಿಗೂ ಗೊತ್ತಾಗದಂತೆ ಕಳೆದ ಏಳೆಂಟು ತಿಂಗಳಿನಿಂದ ಅಕ್ರಮವಾಗಿ ಸಂಗ್ರಹಿಸಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಬಿಬಿಎಂಪಿಯ ಯಲಹಂಕ ವಲಯ ಕಛೇರಿ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಪ್ರಕಟವಾಗಿದೆ. 8 ಸಾವಿರ ಕಿಟ್‌ಗಳ ಪೈಕಿ 4-5 ಸಾವಿರ ಕಿಟ್‌ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಅಡುಗೆ ಎಣ್ಣೆ, ಮಸಾಲಾ, ಹಿಟ್ಟು, ಸಕ್ಕರೆ ಪ್ಯಾಕೆಟ್‌ಗಳು ಈ ಕಿಟ್‌ನಲ್ಲಿದೆ. 8 ತಿಂಗಳಿನಿಂದ ಈ ವಸ್ತುಗಳು ದಾಸ್ತಾನುಗೊಂಡಿದ್ದು, ಈಗಾಗಲೇ ವಸ್ತುಗಳ ಬಳಕೆಯ  ಅವಧಿ ಮುಕ್ತಾಯಗೊಂಡಿದೆ. ಅಕ್ಕಿ, ಬೆಳೆ, ಹಿಟ್ಟುವಿನಲ್ಲಿ ಇಲಿ, ಹೆಗ್ಗಣಗಳ ಓಡಾಡುತ್ತಿದ್ದು, ಹುಳಗಳು ಸೇರಿವೆ.

ದೇವಸ್ಥಾನದ ಆಡಳಿತ ಮಂಡಳಿ ಸಾಕಷ್ಟು ಸಲ, ಇಲ್ಲಿಂದ ಆಹಾರದ ಕಿಟ್‌ಗಳನ್ನು ತಗೆದುಕೊಂಡು ಹೋಗಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ತಮಗೆ ಬೇಕಾದಾಗ ಕಾರುಗಳಲ್ಲಿ, ಟೆಂಪೋಗಳಲ್ಲಿ ಎಷ್ಟು ಬೇಕೋ ಅಷ್ಟು ಕಿಟ್‍ಗಳನ್ನು ಶಿಫ್ಟ್ ಮಾಡುತ್ತಿದ್ದಾರೆ ಎಂಬ ಆರೋಪ ಬಂದಿದೆ.

ಈ ವಿಚಾರದ ಬಗ್ಗೆ ಯಲಹಂಕದ ವಿಭಾಗದ ಪಾಲಿಕೆಯ ಜಂಟಿ ಆಯುಕ್ತ ಡಿ. ಆರ್ ಅಶೋಕ್ ಅವರನ್ನು ಕೇಳಿದರೆ ಅವರು ಮಾತಾನಾಡಲು ಹಿಂದೇಟು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *