ಬಡಜನರ ಕಷ್ಟ ಅರಿತು ದಿನಸಿ, ತರಕಾರಿ ವಿತರಿಸಿದ ಶಾಸಕ ಮುನಿರತ್ನ

Public TV
1 Min Read

ಬೆಂಗಳೂರು: ಕೊರೋನಾ ಮಹಾಮಾರಿಯನ್ನು ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್‍ಅಸ್ತ್ರ ಜಾರಿ ಮಾಡಿದೆ. ಇದರಿಂದ ಬಡವರು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡಜನರ ಕಷ್ಟ ಅರಿತ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕ್ಷೇತ್ರದ ಶಾಸಕ ಮುನಿರತ್ನ, ತನ್ನ ಕ್ಷೇತ್ರದ ಜನರಿಗೆ ಉಚಿತವಾಗಿ ರೇಶನ್ ಕಿಟ್, ತರಕಾರಿ ಕಿಟ್ ಗಳನ್ನು ವಿತರಿಸುತ್ತಿದ್ದಾರೆ.

ರಾಜರಾಜೇಶ್ವರಿ ಕ್ಷೇತ್ರದ 9 ವಾರ್ಡ್ ಗಳಲ್ಲಿಯೂ ದವಸ ಧಾನ್ಯಗಳ ಕಿಟ್ ಹಂಚುತ್ತಿದ್ದು, ಇಂದು ಯಶವಂತಪುರ ವಾರ್ಡ್ ನ ಜನರಿಗೆ ಎಲ್‍ಸಿಆರ್ ಸ್ಕೂಲ್‍ನಲ್ಲಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಈ ಕಿಟ್‍ನಲ್ಲಿ ಅತ್ಯುತ್ತಮ ಗುಣಮಟ್ಟದ ಅಕ್ಕಿ, ಬೇಳೆ-ಕಾಳುಗಳು ಹಾಗೂ ಫ್ರೆಶ್ ಆದ ತರಕಾರಿಗಳನ್ನು ಸುಮಾರು 2000 ಜನರಿಗೆ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಮುನಿರತ್ನ, ಆರ್ ಆರ್ ನಗರದಲ್ಲಿ 9 ವಾರ್ಡ್ ಗಳು ಬರುತ್ತವೆ. 9 ವಾರ್ಡ್ ಗಳಲ್ಲಿಯೂ ರೇಷನ್ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸುತ್ತೇವೆ. ಆರ್ ಆರ್ ನಗರ ಕ್ಷೇತ್ರದ ಜನರೇ ನನ್ನ ದೇವರುಗಳು. ಮೊದಲ ಹಂತದ ಲಾಕ್ ಡೌನ್‍ನಲ್ಲಿ ಫುಡ್ ಹಂಚಿಕೆ ಮಾಡಿದ್ವಿ. ಈಗ ಕೂಡ 9 ವಾರ್ಡ್ ಜನರಿಗೆ ಹಂಚಿಕೆ ಮಾಡ್ತೇವೆ. ಇಂತಹ ಕಷ್ಟದ ಸಮಯದಲ್ಲಿ ಬಡವರ ಹಾಗೂ ಮಧ್ಯಮ ವರ್ಗ ಜನರ ಪರ ನಿಲ್ಲಬೇಕು.

ಆರ್ ಆರ್ ನಗರದ ಎಲ್ಲಾ ಜನರಿಗೆ ಹೇಳೋದು ಒಂದೇ, ಏನೇ ಸಮಸ್ಯೆ ಬಂದ್ರೂ ನನ್ನನ್ನು ಸಂಪರ್ಕಿಸಿ. ಯಶವಂತಪುರದ ರೈಲ್ವೆ ನಿಲ್ದಾಣದ ಹತ್ತಿರ ರಾಜರಾಜೇಶ್ವರಿ ನಗರದ ಕೋವಿಡ್ ತುರ್ತು ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ 10 ದಿನದ ಒಳಗೆ 100 ಐಸಿಯು ಹಾಗೂ 300 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡುತ್ತೇವೆ. ನಮ್ಮ ಕಾರ್ಯಕರ್ತರು, ಮುಖಂಡರಿಗೆ ಕಾಲ್ ಮಾಡಿದ್ರೆ ಬೆಡ್ ವ್ಯವಸ್ಥೆ ಆಗುತ್ತೆ. ಇಲ್ಲ ನನ್ನ ಹತ್ತಿರ ಬನ್ನಿ, ನಾನು ನಿಮ್ಮ ರಕ್ಷಣೆ ಮಾಡುತ್ತೇನೆ ಎಂದ್ರು.

ಈ ವೇಳೆ ಯಶವಂತಪುರದ ರೈಲ್ವೆ ನಿಲ್ದಾಣದ ಹತ್ತಿರದ ನಿರ್ಮಾಣ ಹಂತದಲ್ಲಿರೋ ಕೋವಿಡ್ ತುರ್ತು ಚಿಕಿತ್ಸಾ ಕೇಂದ್ರವನ್ನು ಪರಿಶೀಲನೆ ನಡೆಸಿದ್ರು.

Share This Article
Leave a Comment

Leave a Reply

Your email address will not be published. Required fields are marked *