ಬಜೆಟ್‌ನಲ್ಲಿ ಲಾಲಿಪಾಪ್, ಸಿಎಂ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಲಿ- ರಮೇಶ್‌ ಬಾಬು

Public TV
2 Min Read

ಬೆಂಗಳೂರು: ಮಹಿಳಾ ದಿನಾಚರಣೆ ಪ್ರಯುಕ್ತ ಬಜೆಟ್ ಮೇಲೆ ಬಹು ನಿರೀಕ್ಷೆ ಹೊಂದಿದ್ದ ರಾಜ್ಯದ ಮಹಿಳಿಯರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಲಿಪಾಪ್ ನೀಡಲು ಯತ್ನಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.

ಬಜೆಟ್ ಕುರಿತು ತಮ್ಮ ಅಭಿಪ್ರಾಯ ತಿಳಿಸಿರುವ ಅವರು, ಬಿಜೆಪಿ 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಂದು ಮಹಿಳಾ ದಿನಾಚರಣೆ ದಿನ ಅವರಿಗೆ ಲಾಲಿಪಾಪ್ ನೀಡುವ ಪ್ರಯತ್ನವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ. ಮಹಿಳೆಯರ ಮೇಲೆ ಕನಿಷ್ಠ ಗೌರವ ಇದ್ದರೆ ತಮ್ಮ ಬಜೆಟ್ ಒಳಗಿನ ಸತ್ಯ ಹೇಳಿ, ಲಾಲಿಪಾಪ್ ನೀಡಿರುವ ಕಾರಣಕ್ಕೆ ಈ ರಾಜ್ಯದ ಮಹಿಳೆಯರ ಕ್ಷಮೆ ಕೇಳಲಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಬಿಜೆಪಿಗೆ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಮಹಿಳೆಯರು ಅವರ ಪಕ್ಷದ ಪ್ರಣಾಳಿಕೆ ಓದುವುದಿಲ್ಲ ಎಂಬ ಅಚಲವಾದ ನಂಬಿಕೆ ಇದೆ. ಒಂದು ವೇಳೆ ಓದಿ ಕೇಳಿದರೂ ಕೋವಿಡ್ ಹೆಸರಿನ ರಕ್ಷಾ ಕವಚದ ಉನ್ಮಾದ. ಹೀಗಾಗಿಯೇ ಮಹಿಳಾ ದಿನಾಚರಣೆ ದಿನ ಮಹಿಳೆಯರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.

2018ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ‘ಸ್ತ್ರೀ ಉನ್ನತಿ’ ಯೋಜನೆಯ ಮೂಲಕ ಮಹಿಳೆಯರಿಗೆ 10 ಸಾವಿರ ಕೋಟಿ ರೂಪಾಯಿ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು. ಅಲ್ಲದೆ ರಾಜ್ಯದಲ್ಲಿ ಮಹಿಳೆಯರ ಪ್ರಕರಣ ಸಂಬಂಧ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ನೇಮಿಸಿ, ಒಂದು ಸಾವಿರ ಮಹಿಳಾ ಪೊಲೀಸ್ ನೇಮಕದ ಮೂಲಕ ಭದ್ರತೆಗೆ ಒತ್ತು ನೀಡುತ್ತೇವೆ ಎಂದಿದ್ದರು. ಒಂದು ನೂರು ಕೋಟಿ ರೂಪಾಯಿ ಒದಗಿಸಿ ಮಹಿಳೆಯರಿಗೆ ಹೈನುಗಾರಿಕೆಯಲ್ಲಿ ಶಕ್ತಿ ನೀಡುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿ ಸ್ಮಾರ್ಟ್ ಫೋನ್ ಯೋಜನೆ ಅಡಿಯಲ್ಲಿ ರಾಜ್ಯದ ಬಿಪಿಎಲ್ ಕುಟುಂಬದ ಎಲ್ಲ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡುವ ಭರವಸೆ ನೀಡಿದ್ದರು. ಒಂದು ನೂರು ಕೋಟಿ ರೂಪಾಯಿ ಅನುದಾನ ನೀಡಿ 30 ಮಹಿಳಾ ಮೈಕ್ರೋ, ಸಣ್ಣ ಉದ್ದಿಮೆ ಸ್ಥಾಪಿಸುವುದಾಗಿ ಹೇಳಿದ್ದರು. ಅದೇರೀತಿ ರಾಜ್ಯದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ, ಮಹಿಳಾ ಸಬಲೀಕರಣ ಯೋಜನೆಗಳ ಕನಸುಗಳನ್ನೇ ಬಿತ್ತಿದ್ದರು ಎಂದು ಬಿಜೆಪಿ ಪ್ರಣಾಳಿಕೆಯ ಅಂಶಗಳನ್ನು ಹೇಳಿ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *