ಬಂಗಾರದ ಕಥೆಗಳ ಕಣಜ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’

Public TV
2 Min Read

ಬೆಂಗಳೂರು: ಕೆಲಸಕ್ಕಾಗಿ ಪಟ್ಟಣ ಸೇರುವ ಎಷ್ಟೋ ಯುವಕರು ಒಂದೇ ಒಂದು ಸಿನಿಮಾದಿಂದ ಬದಲಾಗಿ ಕೃಷಿಗೆ ಆದ್ಯತೆ ಕೊಡಲಾರಂಭಿಸಿದ್ದರು. ಅದಕ್ಕೆ ಕಾರಣವಾಗಿದ್ದು ಡಾ.ರಾಜ್‍ಕುಮಾರ್ ನಟಿಸಿದ ಬಂಗಾರದ ಮನುಷ್ಯ ಚಿತ್ರ. ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಕನ್ನಡಿಗರಲ್ಲಿ ಹೊಸ ಕ್ರಾಂತಿ ಮೂಡಿಸಿದ ಈ ಸಿನಿಮಾ ಕುರಿತ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಯನ್ನು ಪತ್ರಕರ್ತ ಮಹೇಶ್ ದೇವಶೆಟ್ಟಿ ಬರೆದಿದ್ದಾರೆ. ಅಣ್ಣಾವ್ರ 92ನೇ ಹುಟ್ಟುಹಬ್ಬದಂದು ಈ ಪುಸ್ತಕವನ್ನು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿದರು. ಡಾ.ಶಿವರಾಜ್‍ಕುಮಾರ್ ಶುಭ ಹಾರೈಸಿದರು.

ಅಣ್ಣಾವ್ರ ಸಿನಿಮಾ ಮೇಕಿಂಗ್ ರಹಸ್ಯ:
ಕೆಲವೊಂದು ಸಿನಿಮಾಗಳೇ ಹಾಗೆ ಬಂಗಾರದ ಅಕ್ಷರದಲ್ಲಿ ಬರೆಯುವಂಥ ಕಥೆಗಳನ್ನು ಹೊಂದಿರುತ್ತವೆ. ಅದರಲ್ಲೂ ಡಾ.ರಾಜ್‍ಕುಮಾರ್ ಚಿತ್ರಗಳ ಪಾಲು
ಮೇಲ್ಪಂಕ್ತಿಯಲ್ಲಿರುತ್ತದೆ. ಆ ಸಾಲಿನಲ್ಲಿ ಹೊಳೆಯುವ ನಕ್ಷತ್ರವೇ ಬಂಗಾರದ ಮನುಷ್ಯ. ಆಗಿನ ಕಾಲದ ಯುವ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ಬಂಗಾರದ ಮನುಷ್ಯದ ಚಿತ್ರದ ಪ್ರತಿಯೊಂದು ಕಥೆಯೂ ವಿಸ್ಮಯ ಮೂಡಿಸುವಂಥದ್ದು. ಹಿಂದೆಂದೂ ಕಂಡು ಕೇಳಿರದ ಮಾಹಿತಿಯನ್ನು ಒಳಗೊಂಡ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಪುಸ್ತಕ ಲೋಕಾರ್ಪಣೆಯಾಗಿದೆ. ಪಬ್ಲಿಕ್ ಟಿವಿ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್‍ರವರು ಬಿಡುಗಡೆ ಮಾಡಿದರು.

ಕನ್ನಡ ಸಿನಿಮಾ ರಂಗದ ಪತ್ರಕರ್ತ ಮಹೇಶ್ ದೇವಶೆಟ್ಟಿ ವಿರಚಿತ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಸಾಕಷ್ಟು ರೋಚಕ ಹಾಗೂ ವಿಶಿಷ್ಟ ಕಥೆ-ಮಾಹಿತಿಗಳನ್ನು ಒಳಗೊಂಡಿದೆ. ಪ್ರಸ್ತುತ ಮಹೇಶ್ ದೇವಶೆಟ್ಟಿ ಪಬ್ಲಿಕ್ ಟಿವಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 49 ವರ್ಷಗಳ ಹಿಂದೆ ತೆರೆ ಕಂಡು ಸತತ ಎರಡು ವರ್ಷ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರದ ಕುರಿತ ಅಪರೂಪದ ಮಾಹಿತಿ ಹೆಕ್ಕಿ ತೆಗೆದು ಪುಸ್ತಕ ರೂಪದಲ್ಲಿ ಇಂದಿನ ಜನತೆಗೆ ನೀಡಿದ್ದಾರೆ.

‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ಕೃತಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಬೆನ್ನುಡಿ ಬರೆದಿದ್ದಾರೆ. ಅದೇ ಮೇಕಿಂಗ್ ಆಫ್ ಬಂಗಾರದ ಮನುಷ್ಯ ಕೃತಿಯನ್ನು ಪಬ್ಲಿಕ್ ಟಿವಿ ಕಛೇರಿಯಲ್ಲಿಯೇ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಬಿಡುಗಡೆ ಮಾಡಿದರು. ಸಂಪಾದಕರಾದ ದಿವಾಕರ್ ಹಾಗೂ ಔಟ್‍ಪುಟ್ ಚೀಫ್ ಆನಂದ್ ಮತ್ತು ಲೇಖಕ ಮಹೇಶ್ ದೇವಶೆಟ್ಟಿ ಉಪಸ್ಥಿತಿಯಲ್ಲಿದ್ದರು. ಈ ಮೂಲಕ ಇಂದಿನ ಸಿನಿಮಾ ಪತ್ರಕರ್ತರಿಗೂ, ಸಿನಿ ಪ್ರಿಯರಿಗೂ ಇಷ್ಟವಾಗುವ ಅನೇಕ ಸಂಗತಿ ಒಳಗೊಂಡ ‘ಮೇಕಿಂಗ್ ಆಫ್ ಬಂಗಾರದ ಮನುಷ್ಯ’ ದಿವ್ಯ ಕಥನ ಲೋಕಾರ್ಪಣೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *