ಫ್ಲೈಓವರ್ ಮಧ್ಯ ರೋಡಿನಲ್ಲಿ ಕುಳಿತು ಘರ್ಜಿಸಿದ ಹುಲಿರಾಯ – ವಿಡಿಯೋ ವೈರಲ್‌

Public TV
1 Min Read

ಭೋಪಾಲ್: ವಾಹನಗಳು ಸಂಚರಿಸುತ್ತಿರುವ ಫ್ಲೈಓವರ್ ನಲ್ಲಿ ಹುಲಿಯೊಂದು ಘರ್ಜನೆ ಹಾಕಿ ವಾಹನ ಸವಾರರನ್ನು ಭಯ ಪಡುವಂತೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪೆಂಚ್ ರಾಷ್ಟ್ರೀಯ ಉದ್ಯಾನದ ಬಫರ್ ವಲಯದೊಳಗೆ ಬರುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಈ ಘಟನೆ ಸಂಭವಿಸಿದೆ. ಇದನ್ನು ಕಾರಿನಲ್ಲಿ ಕುಳಿತು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹತ್ತಿರದಲ್ಲೇ ಪೆಂಚ್ ರಾಷ್ಟ್ರೀಯ ಉದ್ಯಾನವನ ಇರುವುದರಿಂದ ಹುಲಿ ಅಲ್ಲಿಂದ ರಸ್ತೆಗೆ ಬಂದಿದೆ. ಈ ಸ್ಥಳದಲ್ಲಿ ಫ್ಲೈಓವರ್ ಕೆಲಸ ನಡೆಯುತ್ತಿದ್ದು, ಕತ್ತಲು ಇರುವುದರಿಂದ ಹುಲಿ ಬಂದಿದೆ ಎನ್ನಲಾಗಿದೆ. ವಾಹನಗಳು ಸಂಚರಿಸುತ್ತಿದ್ದರೂ ಯಾವುದೇ ಭಯವಿಲ್ಲದೇ ಹುಲಿ ರಸ್ತೆ ಮಧ್ಯದಲ್ಲೇ ಬಂದು ಮಲಗಿದೆ. ನಡುರಸ್ತೆಯಲ್ಲಿ ಹುಲಿಯನ್ನು ಕಂಡು ಗಾಬರಿಯಾದ ವಾಹನ ಸವಾರರು ವಾಹನವನ್ನು ನಿಲ್ಲಿಸಿಕೊಂಡು ಹುಲಿ ಹೋಗುವವರೆಗೂ ಕಾದಿದ್ದಾರೆ. ಈ ವೇಳೆ ಹುಲಿ ಯಾರ ಮೇಲೂ ದಾಳಿ ಮಾಡಿಲ್ಲ. ಅಲ್ಲದೇ ಹುಲಿ ಕುಳಿತು ಜೋರಾಗಿ ಘರ್ಜನೆ ಹಾಕುತ್ತಿರುವುದನ್ನು ಸೆರೆಯಾದ ವಿಡಿಯೋದಲ್ಲಿ ಕಾಣಬಹುದು.

ಈ ವಿಚಾರದ ಬಗ್ಗೆ ಮಾತನಾಡಿರುವ ಹುಲಿಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು, ನಾವು ಹುಲಿಯನ್ನು ರಸ್ತೆ ಮಧ್ಯೆ ಕಂಡು ಭಯಗೊಂಡೆವು. ತಕ್ಷಣ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದೆವು. ಅವರು ಕೂಡ ತಕ್ಷಣ ಸ್ಥಳಕ್ಕೆ ಬಂದರು. ಆದರೆ ಈ ವೇಳೆ ಯಾರಿಗೂ ತೊಂದರೆ ನೀಡದೆ ಕೆಲ ಕಾಲ ನಡುರಸ್ತೆಯಲ್ಲಿ ಕುಳಿತ ಹುಲಿ, ನಂತರ ತಾನಾಗಿಯೇ ಅರಣ್ಯದ ಕಡೆಗೆ ಹೊರಟು ಹೋಯ್ತು ಎಂದು ಹೇಳಿದ್ದಾರೆ.

ಹುಲಿ ಕುಳಿತ ಪ್ರದೇಶವು ಪೆಂಚ್ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದಲ್ಲಿದೆ. ಪೆಂಚ್ ರಾಷ್ಟ್ರೀಯ ಉದ್ಯಾನವನ ಹೆಚ್ಚಿನ ಸಂಖ್ಯೆಯ ಹುಲಿಗಳಿರುವ ತಾಣವಾಗಿದೆ. ಈಗ ಹುಲಿಗಳು ಮತ್ತು ಇತರ ವನ್ಯಜೀವಿಗಳ ಸುಲಭ ಸಂಚಾರಕ್ಕೆ ಅನುಕೂಲವಾಗಲಿ ಮತ್ತು ಅವುಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಯೋನಿ ಮತ್ತು ನಾಗ್ಪುರದ ನಡುವಿನ ಹೆದ್ದಾರಿಯಲ್ಲಿ ಫ್ಲೈಓವರ್ ಗಳನ್ನು ನಿರ್ಮಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *