ಫ್ಲೈಓವರ್‌ಗೆ ಸಾವರ್ಕರ್ ಹೆಸರಿಡದೇ ರಾಹುಲ್, ಸೋನಿಯಾ ಗಾಂಧಿ ಹೆಸರಿಡಬೇಕಾ?- ಸಿಸಿ ಪಾಟೀಲ್

Public TV
2 Min Read

ಗದಗ: ಬೆಂಗಳೂರಿನ ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಅವರ ಹೆಸರಿಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಚಿವ ಸಿ.ಸಿ.ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಸಚಿವರು, ಫ್ಲೈಓವರಿಗೆ ವೀರ ಸಾವರ್ಕರ್ ಹೆಸರಿಡದೇ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್‍ನವರು ಮೊದಲು ತಿಳಿಯಲಿ. ಸಾವರ್ಕರ್ ಅವರ ಬಗ್ಗೆ ಮಾತಾಡುವಂತ ಯೋಗ್ಯತೆ ಯಾವೋಬ್ಬ ಕಾಂಗ್ರೆಸ್ಸಿಗರಿಗೂ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿಗರಿಗೆ ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ್ ಅವರು ಗೊತ್ತಿಲ್ಲಾ. ವೀರ ಸಾವರ್ಕರ್ ಬಿಜೆಪಿಯವರಾ? ಅವಾಗ ಬಿಜೆಪಿ ಇತ್ತಾ ಅಂತ ಪ್ರಶ್ನಿಸಿದರು.

ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್, ಇಂದಿರಾ ಗಾಂಧಿ ರೋಡ್, ಆಯೋಜನೆ ಈ ಯೋಜನೆ ಅಂತೆಲ್ಲಾ ಇದೆ. ಎಲ್ಲಾದರೂ ನರೇಂದ್ರ ಮೋದಿ ರೋಡ್, ಬಿ.ಎಸ್.ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿ ಉತ್ತುಂಗಕ್ಕೆ ತಂದ್ರಾ? ಕಾಂಗ್ರೆಸ್ಸಿಗರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.

ಬಿಜೆಪಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ವಿಚಾರವಾಗಿ ಮಾತನಾಡಿದ ಸಚಿವರು, ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಬಾಧಿತ, ಸುಭದ್ರವಿದೆ. ಹಲವಾರು ಹಿರಿಯ ಶಾಸಕರು ನಮ್ಮಲ್ಲಿ ಭಿನ್ನಮತ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ನಾಯಕರು ಸಹ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೊಗಳಿದ್ದಾರೆ. ನಮ್ಮ ಬಗ್ಗೆ ಯಾರು ಏನೂ ಚಿಂತೆ ಮಾಡುವ ಅಗತ್ಯವಿಲ್ಲ, ಸರ್ಕಾರ ಸುಭದ್ರವಾಗಿರುತ್ತದೆ. ಮುಂದಿನ ಅವಧಿಗೆ ಪಕ್ಷವನ್ನು ಬಿಎಸ್‍ವೈ ಮತ್ತೆ ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದರು.

ಕಪ್ಪತ್ತಗುಡ್ಡದಲ್ಲಿ ಸರ್ಕಾರ ಮೈನಿಂಗ್ ನಡೆಸುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಆರೋಪಕ್ಕೆ ಸಿ.ಸಿ.ಪಾಟೀಲ್ ತಿರುಗೇಟು ನೀಡಿದರು. ಕಪ್ಪತ್ತಗುಡ್ಡ ರಕ್ಷಣೆ ಸರ್ಕಾರದ ಹೊಣೆ. ನಾನು ಮೂಲತಃ ಬೆಳಗಾವಿ ಜಿಲ್ಲೆಯವನು. ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಶಿಕ್ಷಣ ಸ್ಥಾಯಿಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸತೀಶ್ ಜಾರಕಿಹೊಳಿ ಆಧಾರ ರಹಿತ ಆರೋಪ ಮಾಡಿದರೆ ಅವರ ಮೇಲೆ ಬ್ಲಾಕ್ ಆಂಡ್ ವೈಟ್ ಅಲಿಗೇಷನ್ ಸಾಕಷ್ಟಿವೆ. ಸಮಯ ಸಂದರ್ಭ ಬಂದಾಗ ಮುಂದಿನ ದಿನಗಳಲ್ಲಿ ಎಲ್ಲಾ ಪುಟಗಳನ್ನ ತೆರೆದಿಡುತ್ತೇನೆ ಎಂದು ಟಾಂಗ್ ಕೊಟ್ಟರು.

ಮುಂಬೈ-ಗದಗ ಎಕ್ಸ್‍ಪ್ರೆಸ್ ರೈಲು ಬರಲಿದೆ. ರಾಜ್ಯದ ಜನ ಮುಂಬೈ ನಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದು ಮುಂಬೈ ಕನ್ನಡಿಗರನ್ನ ಅನಿವಾರ್ಯವಾಗಿ ಕರೆಸಿಕೊಳ್ಳಬೇಕಿದೆ. ಎಷ್ಟು ಜನ ಮುಂಬೈನಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ನಂತರ 7 ದಿನ ಸರ್ಕಾರದ ನಿಯಮಗಳ ಪ್ರಕಾರ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.

ಮುಂಬೈನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಸಾಲದಿದ್ದರೆ, ಕೊರತೆ ಕಂಡುಬಂದರೆ ಮುಂದೆ ತಾಲೂಕ ಕೇಂದ್ರಗಳಿಗೂ ಕಳಿಸುತ್ತೆವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *