ಫ್ರೀಡಂ ಪಾರ್ಕಿಗೆ ಭೇಟಿ ನೀಡಿ ಜೈಲುವಾಸದ ದಿನಗಳ ನೆನಪಿಸಿಕೊಂಡ ಸಚಿವ ಅಶೋಕ್

Public TV
2 Min Read

– ತುರ್ತುಪರಿಸ್ಥಿತಿ ಹೇರಿಕೆ ವಿರೋಧಿಸಿ ಕರಾಳ ದಿನ ಆಚರಣೆ

ಬೆಂಗಳೂರು: ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯನ್ನ ವಿರೋಧಿಸಿ ಇಂದು ಫ್ರೀಡಂ ಪಾರ್ಕ್ ನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಕರಾಳ ದಿನ ಆಚರಣೆ ಮಾಡಿದರು.

ಈ ವೇಳೆ ಅಂದಿನ ದಿನಗಳನ್ನ ನೆನಪಿಸಿಕೊಂಡು ಸಚಿವರು, ಜಯಪ್ರಕಾಶ್ ನಾರಾಯಣ್ ಅವರ ಕರೆಯ ಮೇರೆಗೆ ನಾನು ಮತ್ತು ನಮ್ಮ ಕಾಲೇಜಿನ ವಿದ್ಯಾರ್ಥಿ ನಾಯಕರುಗಳು ಯಶವಂತಪುರ ವೃತ್ತದ ಬಳಿ ತುರ್ತುಪರಿಸ್ಥಿತಿಯನ್ನ ವಿರೋಧಿಸಿ ಹೋರಾಟ ಮಾಡಿದ್ದೇವು. ಆ ವೇಳೆ ನಮ್ಮನ್ನ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು(ಇಂದಿನ ಫ್ರೀಡಂ ಪಾರ್ಕ್). ನಮ್ಮನ್ನ ಜೈಲಿಗೆ ಕರೆದುಕೊಂಡು ಬಂದ ನಂತರ ಕಂಬಳಿ ಹಾಗೂ ಅಲ್ಯೂಮಿನಿಯಂ ತಟ್ಟೆ ನೀಡಲಾಗಿತ್ತು. ನೆಲದ ಮೇಲೆ ಮಲಗುತ್ತಿದ್ದೇವು.

ತಿನ್ನುವುದಕ್ಕೆ ರಾಗಿ ಮುದ್ದೆ ನೀಡುತ್ತಿದ್ದರು. ಅದು ಅಲ್ಪ ಆಹಾರ. ನಮಗೆಲ್ಲಾ ಒಂದೇ ಶೌಚಾಲಯವಿತ್ತು. ತುರ್ತುಪರಿಸ್ಥಿತಿಯಲ್ಲಿ ಗರ್ಭಿಣಿಯರನ್ನು ಕೂಡಾ ಶಿಕ್ಷಿಸಲಾಗಿತ್ತು. ನಮಗೆಲ್ಲಾ ಭವಿಷ್ಯವೇ ಮಸುಕಾಗಿತ್ತು. ಆ ವೇಳೆ 5 ರಿಂದ 6 ಸಾವಿರ ಜನ ಪ್ರಾಣ ಕಳೆದುಕೊಂಡರು. ಎಲ್.ಕೆ.ಅಡ್ವಾಣಿ, ವಾಜಪೇಯಿ, ದೇವೇಗೌಡರಂಥಹ ಹಿರಿಯ ನಾಯಕರು ಅಂದು ಜೈಲುವಾಸ ಅನುಭವಿಸಿದರು. ಅವರಿಂದೆಲ್ಲಾ ನಾವು ಸ್ಫೂರ್ತಿ ಪಡೆದೆವು. ಅಧಿಕಾರದಿಂದ ಕಾಂಗ್ರೆಸ್ ನ್ನು ಉಚ್ಛಾಟಿಸಿದ ನಂತರವಷ್ಟೇ ಜೈಲಿನಿಂದ ಬಿಡುಗಡೆ ಮಾಡಲಾಯಿತು. ನನ್ನ ಪ್ರಕಾರ ಆ ಹೋರಾಟ ಎರಡನೇ ಸ್ವಾತಂತ್ರ ಸಂಗ್ರಾಮ. ಅಂದು ಮತ್ತೊಮ್ಮೆ ಪ್ರಜಾಪ್ರಭುತ್ವವನ್ನ ಮರುಸ್ಥಾಪನೆ ಮಾಡಲಾಯಿತು ಎಂದು ಹೇಳಿದರು.

ಅಂದು ತಾವು ಕಳೆದಿದ್ದ ಬಂಧಿಖಾನೆಗೆ ಭೇಟಿ ನೀಡಿದ ಅಶೋಕ, ತುರ್ತುಪರಿಸ್ಥಿತಿಯ ದಿನಗಳಲ್ಲಿ ಪೊಲೀಸರು ಅಮಾನವೀಯವಾಗಿ ವರ್ತನೆಗೆ ಪ್ರಾಣ ತೆತ್ತ ಸಾವಿರಾರು ಜನರಿಗೆ ಇಂದು ಮತ್ತೊಮ್ಮೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅಂದು ಕೇಂದ್ರ ಕಾರಾಗೃಹವನ್ನ ಸ್ಥಳಾಂತರಿಸಿ, ಫ್ರೀಡಂ ಪಾರ್ಕ್ ಎಂದು ಪರಿವರ್ತನೆ ಮಾಡಿದಾಗ ನಾನು ಗೃಹ ಸಚಿವ ಹಾಗೂ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಆ ನೆನಪಿಗಾಗಿ ಅಂದು ನಾವು ವಾಸವಿದ್ದ ಕೆಲ ಬಂಧಿಖಾನೆಗಳನ್ನ ಹಾಗೆಯೇ ಉಳಿಸಿಕೊಳ್ಳುವಂತೆ ಕೋರಿಕೊಂಡಿದ್ದೆ. ಇವುಗಳು ನಮ್ಮ ಮುಂದಿನ ಪೀಳಿಗೆಗೆ ಇತಿಹಾಸದಲ್ಲಿ ನಡೆದಿದ್ದ ಘೋರ ಘಟನೆಗಳಿಗೆ ಸಾಕ್ಷಿಯಾಗಿ ಉಳಿಯಲಿವೆ ಎಂಬುದು ನನ್ನ ಭಾವ ಎಂದರು.

ನಂತರದಲ್ಲಿ ಸಚಿವ ಆರ್ ಅಶೋಕ್ ಅವರನ್ನು ಸೇರಿದಂತೆ ಅಂದು ಜೈಲುವಾಸ ಅನುಭವಿಸಿದ ಕೆಲವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *