ಫೆ.25ರವರೆಗೆ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಪೊಲೀಸ್ ಕಸ್ಟಡಿಗೆ

Public TV
1 Min Read

– ಕೊಕೇನ್ ಪ್ರಕರಣದಲ್ಲಿ ತಡರಾತ್ರಿ ಅರೆಸ್ಟ್

ಕೋಲ್ಕತ್ತಾ: ಕೊಕೇನ್ ಪ್ರಕರಣದಲ್ಲಿ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯನ್ನ ಎನ್‍ಡಿಪಿಎಸ್ ನ್ಯಾಯಾಲಯ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಶುಕ್ರವಾರ ರಾತ್ರಿ ಪಮೇಲಾ ಗೋಸ್ವಾಮಿ ಬಂಧನಕ್ಕೊಳಗಾಗಿದ್ದು, ಕಾರಿನಲ್ಲಿ 100 ಗ್ರಾಂ ಕೊಕೇನ್ ಪತ್ತೆಯಾಗಿತ್ತು.

ನ್ಯಾಯಾಲಯದಲ್ಲಿ ಪಮೇಲಾ ಗೋಸ್ವಾಮಿ ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಐಡಿ ತನಿಖೆಯ ಅಗತ್ಯವಿದೆ, ರಾಕೇಶ್ ಸಿಶಂಗ್ ಎಂಬಾತ ಕೊಕೇನ್ ನನ್ನ ಬಳಿಯಲ್ಲಿರಿಸಿರುವ ಖಚಿತ ಮಾಹಿತಿ ನನಗೆ ಲಭ್ಯವಾಗಿದೆ. ಈ ಸಂಬಂಧ ಐದು ದಿನಗಳ ಹಿಂದೆ ನಾನು ಆಡಿಯೋ ರೆಕಾರ್ಡ್ ಸಹ ಮಾಡಿದ್ದೇನೆ ಎಂದು ಪಮೇಲಾ ವಿಚಾರಣೆ ವೇಳೆ ಹೇಳಿದ್ದಾರೆ.

ನನ್ನ ವಿರುದ್ಧದ ಈ ಮೋಸದ ಜಾಲ ಬಹುದಿನಗಳಿಂದ ರಚಿಸಲಾಗಿದೆ. ನ್ಯೂ ಅಲಿಪುರ ಪೊಲೀಸ್ ಠಾಣೆ ಸಹ ಈ ಮೋಸದಾಟದ ಒಂದು ಭಾಗವಾಗಿರುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆ ಡಿಟೆಕ್ಟಿವ್ ಡಿಪಾರ್ಟ್ ಮೆಂಟ್ (ಡಿಡಿ) ಅಥವಾ ಸಿಐಡಿ ನಡೆಸಬೇಕಿದೆ. ಸತ್ಯಕ್ಕೆ ಗೆಲವು ಸಿಗಲಿದೆ ಎಂದು ಹೇಳಿದ್ದು, ನ್ಯಾಯಾಲಯದಿಂದ ಹೊರ ಬಂದ ಬಳಿಕವೂ ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ.

ಪಾಮೇಲಾ ನಮ್ಮ ವಿರುದ್ಧ ಆರೋಪಗಳನ್ನ ಮಾಡುತ್ತಿರುವ ಉದ್ದೇಶ ನಮಗೆ ಗೊತ್ತಿಲ್ಲ. ಫೇಸ್‍ಬುಕ್ ನಲ್ಲಿ ಭಾರತಿ ಘೋಷ್, ಸ್ವಪ್ನಾ ದಾಸಗುಪ್ತಾ ಸೇರಿದಂತೆ ದೊಡ್ಡ ನಾಯಕರ ವಿರುದ್ಧವೂ ಆರೋಪ ಹೊರಿಸಿದ್ದಾರೆ. ಸ್ವತಃ ಪಮೇಲಾ ವಿರುದ್ಧವೇ ಅವರ ತಂದೆ ದೂರು ದಾಖಲಿಸಿದ್ದರು. ನಾನು ಎಲ್ಲ ತನಿಖೆಗೂ ಸಿದ್ಧನಿದ್ದೇನೆಂದು ರಾಕೇಶ್ ಸಿಂಗ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಕಾನೂನಿನ ಮುಂದೆ ಎಲ್ಲರೂ ಒಂದೇ: ಇನ್ನು ಪಮೇಲಾ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಕಾನೂನಿನ ಮುಂದೆ ಎಲ್ಲರೂ ಒಂದೇ. ತನಿಖೆಯಿಂದ ಸತ್ಯ ಗೊತ್ತಾಗಲಿದೆ. ಈ ಕುರಿತು ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *