ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

Public TV
1 Min Read

ಮಡಿಕೇರಿ: ಸರ್ಕಾರಿ ಶಿಕ್ಷಕರೊಬ್ಬರು ಕೇವಲ ವೃತ್ತಿಗೆ ಸೀಮಿತವಾಗದೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ಮರುಬಳಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪರಿಸರ ಪ್ರೇಮಿಯಾಗಿ ಇತರರಿಗೆ ಮಾದರಿ ಆಗಿದ್ದಾರೆ.

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಸರ್ಕಾರಿ ಶಿಕ್ಷಕರಾಗಿ ಪರಿಸರ ಕಾಳಜಿ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯ ಕ್ಯಾನ್‍ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ.

ಅವುಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿದ್ದು, ನೋಡಲು ಸುಂದರವಾಗಿವೆ. ಅಲ್ಲದೇ ಸಾಮಾನ್ಯ ಹೂ ಕುಂಡಗಳಿಗಿಂತಲೂ ಇವು ಬಾಳಿಕೆಯಿಂದ ಕೂಡಿವೆ. ಕ್ಯಾನ್‍ಗಳನ್ನು ನೆಲದಲ್ಲಿಡುವ ಕುಂಡಗಳಾಗಿ ಮಾತ್ರವಲ್ಲದೇ ಹ್ಯಾಂಗಿಂಗ್ ಪಾಟ್‍ಗಳು, ಗೋಡೆ ಮತ್ತು ಕಂಬಗಳಿಗೆ ವಾಲ್ ಪಾಟ್‍ಗಳನ್ನಾಗಿಯೂ ಬಳಸಬಹುದು.

ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶದಿಂದ, ಹ್ಯಾಂಗಿಂಗ್ ಪಾಟ್‍ನ ಮೇಲೆ ಸುರಿದ ನೀರು ಹೆಚ್ಚಾದರೆ ಒಂದೆಡೆ ಸಂಗ್ರಹವಾಗುವ ಹಾಗೆ ನೀರಿನ ಬಾಟಲಿಗಳ ತಳ ಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟಿನ ತಳಭಾಗದಲ್ಲಿ ಅಳವಡಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪಕ್ಷಿಗಳು ಕುಡಿಯುವಂತೆ ವಿನ್ಯಾಸ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *