ಪ್ರೇಕ್ಷಣೀಯ ಸ್ಥಳವಾಗಿ ನೃಪತುಂಗ ಬೆಟ್ಟ ಅಭಿವೃದ್ಧಿ: ಜಗದೀಶ್ ಶೆಟ್ಟರ್

Public TV
1 Min Read

ಹುಬ್ಬಳ್ಳಿ: ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ಮುಂದಿನ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಕೈಗಾರಿಕೆಯಲ್ಲಿ ಭಾರಿ ಬದಲಾವಣೆಯಾಗಲಿದ್ದು, ರಾಜ್ಯದ ಭವಿಷ್ಯದ ನಗರವಾಗಿ ರೂಪುಗೊಳ್ಳಲಿದೆ. ನೃಪತುಂಗ ಬೆಟ್ಟ ಹುಬ್ಬಳ್ಳಿ ನಗರಕ್ಕೆ ವರದಾನವಾಗಿದೆ. ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ಇಂದು ನಗರದ ನೃಪತುಂಗ ಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ನೃಪತುಂಗ ಬೆಟ್ಟದ ವಾಯು ವಿಹಾರಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. 1994ರಲ್ಲಿ ನೃಪತುಂಗ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಿದಾಗ, ಹಲವು ಜನರು ಕುಹಕವಾಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಬೆಟ್ಟದ ಅಭಿವೃದ್ಧಿ ಮಾಡಲಾಗಿದೆ. ಕಲ್ಲು ಮಣ್ಣಿನ ಜಾಗದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳಸಲಾಗಿದೆ. ವಿಶೇಷ ಅನುದಾನದಡಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ ಎಂದರು.

ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆಯವರೆಗೆ ರೋಪ್ ವೇ ನಿರ್ಮಿಸಲು ಯೋಚಿಸಿ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು, ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಕಾರಣಗಳು ಎದುರಾಗಿದ್ದರಿಂದ ಯೋಜನೆಯನ್ನು ರದ್ದುಗೊಳಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತರು ನೃಪತುಂಗ ಬೆಟ್ಟದಿಂದ ಸಾಯಿ ಮಂದಿರದವರೆಗೆ ರೋಪ್ ವೇ ನಿರ್ಮಾಣದ ಸಾಧ್ಯತೆ ಬಗ್ಗೆ ತಜ್ಞನರ ನೇತೃತ್ವದಲ್ಲಿ ಯೋಜನೆ ತಯಾರಿಸಿದರೆ, ಸಿ.ಎಸ್.ಆರ್. ನಿಧಿಯಡಿ ಹಣ ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೃಪತುಂಗ ಬೆಟ್ಟದಲ್ಲಿ ನೃಪತುಂಗೋತ್ಸವ ಆಯೋಜನೆ, ಪ್ರವಾಸಿಗರಿಗೆ ವಾಹನ ವ್ಯವಸ್ಥೆ, ಸುಸಜ್ಜಿತ ಮಲ್ಟಿ ಜಿಮ್, ಕ್ಯಾಂಟೀನ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ವಾಯು ವಿಹಾರಿಗಳ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಅರಣ್ಯಸಂರಕ್ಷಣಾಧಿಕಾರಿ ಯಶ್ ಪಾಲ್, ವಾಯು ವಿಹಾರಿ ಸಂಘದ ಡಾ.ಗೋವಿಂದ ಮಣ್ಣೂರ, ಬಿ.ಎಫ್.ಬಿಜಾಪುರ, ಸಿದ್ದು ಮೊಗಲಿ ಶೆಟ್ಟರ್, ಎಸ್.ವಿ ಅಂಗಡಿ, ಲಿಂಗರಾಜ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *