ಪ್ರೀತಿ ಕೊಂದ ನೋವಲ್ಲಿ ನೇಣಿಗೆ ಕೊರಳೊಡ್ಡಿದ ಉಡುಪಿಯ ಎಂಬಿಎ ಪದವೀಧರೆ

Public TV
2 Min Read

ಉಡುಪಿ: ಪ್ರೀತಿಯ ಪಾಶಕ್ಕೆ ತಲೆಯೊಡ್ಡಿ ಎಂಬಿಎ ಪದವೀಧರೆ ಪ್ರಾಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಪ್ರಾಣ ಕಳೆದುಕೊಂಡ ಯುವತಿ ಅನಿಶಾ, ಗೆಳೆಯ ಚೇತನ್ ಮೇಲೆ ಆರೋಪ ಹೊರಿಸಿ ನಾಲ್ಕು ಪುಟ ಡೆತ್ ನೋಟ್ ಬರೆದಿದ್ದಾಳೆ.

ಆರು ವರ್ಷ ಇಬ್ಬರ ಪ್ರೀತಿ ತಂಗಾಳಿಯಂತಿತ್ತು. ಮದುವೆಯ ಮಾತುಕತೆ ಶುರುವಾದಾಗ ಇಬ್ಬರ ನಡುವೆ ಬಿರುಗಾಳಿ ಎದ್ದಿದೆ, ಜಗಳ ಜೋರಾಗಿದೆ. ಎರಡು ಮನೆಗಳಲ್ಲಿ ರಾದ್ಧಾಂತ ಆಗಿದೆ. ಮದುವೆ ಸಾಧ್ಯವಿಲ್ಲ ಎಂದಾಗ ಅನಿಶಾ ಪೂಜಾರಿಗೆ ಸಿಡಿಲು ಬಡಿದಂತಾಗಿದೆ. ಪ್ರೀತಿಯ ಪಾಶಕ್ಕೆ ಸಂಪೂರ್ಣ ಸಿಲುಕಿದ್ದ ಎಂಬಿಎ ಪದವೀಧರ ನೇಣಿಗೆ ಶರಣಾಗಿದ್ದಾಳೆ. ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಬ್ರಹ್ಮಾವರ ತಾಲೂಕು ಸಾಯ್ಬರಕಟ್ಟೆ ಸಮೀಪದ ಕಾಜ್ರಳ್ಳಿ ನಿವಾಸಿ. ಅನಿಶಾ ಜಿ. ಪೂಜಾರಿ ಸಾವು ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ.

ಮಧ್ಯಮ ವರ್ಗದ ಕುಟುಂಬವಾದ್ರೂ ಸಾಲ ಮಾಡಿ ಅನಿಶಾಳಿಗೆ ಎಂಬಿಎ ಓದಿಸಲಾಗಿತ್ತು. ಶಿಕ್ಷಣ, ಬೆಂಗಳೂರು ಖಾಸಗಿ ಕಂಪನಿ ಉದ್ಯೋಗದಲ್ಲಿ ಇದ್ದಾಗ ಈಕೆಯ ಸಾಧನೆಗಳಿಗೆ ಮನೆಯಲ್ಲಿರುವ ಮೆಡಲ್ ಗಳೇ ಸಾಕ್ಷಿ. ವಯೋ ಸಹಜ ಪ್ರೀತಿ ಒಂದೇ ಊರಿನ ಇಬ್ಬರಲ್ಲಿ ಮೊಳಕೆಯೊಡೆದಿತ್ತು. ಇಬ್ಬರೂ ಊರೂರು ಸುತ್ತಿ ಪ್ರೀತಿಕಡಲಲ್ಲಿ ತೇಲಿದ್ದಾರೆ. ಆದ್ರೆ ಅನಿಶಾ ಪೂಜಾರಿ ಪರಿಪರಿಯಾಗಿ ಬೇಡಿದರೂ ಚೇತನ್ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಆತ ಕಡೆಗಣಿಸಿದ್ದಾನೆ.

ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದಾನೆ ಎಂದು ತಿಳಿದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಚೇತನ್ ಗೆ ಸಂಬಂಧಪಟ್ಟ ಹಾಡಿಯಲ್ಲಿ ಅನಿಶಾ ನೇಣಿಗೆ ಶರಣಾಗಿದ್ದಾಳೆ. ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಾಳೆ. ತನ್ನ ಫೇಸ್ ಬುಕ್ ನಲ್ಲಿ ಚೇತನ್ ಒಬ್ಬ ಗರ್ಲ್ಸ್  ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾಳೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಶಾ ಪೂಜಾರಿ ಸಾವಿನ ನಂತರ ಚೇತನ್ ತಲೆಮರೆಸಿಕೊಂಡಿದ್ದಾನೆ.

ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದು, ಬಿಲ್ಲವ ಸಂಘಟನೆ ಮಧ್ಯಪ್ರವೇಶದ ನಂತರ ಎಫ್‍ಐಆರ್ ದಾಖಲು ಮಾಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಲ್ಲವ ಯುವ ವೇದಿಕೆ ಅಧ್ಯಕ್ಷ, ವಕೀಲ ಪ್ರವೀಣ್ ಪೂಜಾರಿ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಬಿಲ್ಲವ ಸಂಘಟನೆ ಕುಟುಂಬದ ಜೊತೆ ಇದೆ. ದುಷ್ಪ್ರೇರಣೆಯಿಂದ ನಡೆದ ಕೊಲೆ ಇದು. ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಬಂಧಿ ಸುನಿತಾ ಮಾತನಾಡಿ, ಲಾಕ್ ಡೌನ್ ಸಂದರ್ಭ ಕೆಲಸ ಬಿಟ್ಟು ಬಂದಿದ್ದ ಅನಿಶಾ ಸಾಯುವ ಹಿಂದಿನ ದಿನ ಕೂಡಾ ಸಂದರ್ಶನಕ್ಕೆ ಹಾಜರಾಗಿದ್ದಳು. ಗೃಹಪ್ರವೇಶ ಅಂತ ಮನೆಯಿಂದ ಹೋಗಿದ್ದಾಳೆ. ಮದುವೆಯಾಗುವಂತೆ ಚೇತನ್ ಕುಟುಂಬದ ಜೊತೆ ಆಕೆ ಮಾತನಾಡಿ ಮನವೊಲಿಸಲು ಯತ್ನಿಸಿದ್ದಾಳೆ. ಯಾವ ಪ್ರಯತ್ನ ಕೂಡಾ ಫಲಿಸದಿದ್ದಾಗ ಪ್ರಾಣ ಕಳೆದುಕೊಂಡಿದ್ದಾಳೆ ಎಂದರು.

ಎಂಬಿಎ ಉತ್ತೀರ್ಣಳಾಗಿರುವ ಅನಿಶಾ ಪೂಜಾರಿ ಪ್ರೀತಿ ವಿಚಾರದಲ್ಲಿ ಸೋತಿದ್ದಾಳೆ. ಪ್ರಾಣ ಅರ್ಪಣೆ ಮಾಡಿದ್ದಾಳೆ. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಚೇತನ್ ಶೆಟ್ಟಿಗೆ ಶಿಕ್ಷೆಯಾಗಬೇಕು ಎಂದು ಆಕೆಯ ಕುಟುಂಬ ಕಣ್ಣೀರಿಡುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *