– ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ
ಹೈದರಾಬಾದ್: 10 ವರ್ಷಗಳ ಹಿಂದೆ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್ ಪಟ್ಟಣದಲ್ಲಿ ನಡೆದಿದೆ.
ರಮ್ಯಾ (29) ಮತ್ತು ರಾಜು (30) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಹತ್ತು ವರ್ಷಗಳ ಹಿಂದೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ ಬೇರೆ ಬೇರೆ ಮದುವೆಯಾಗಿದ್ದು, ರಮ್ಯಾ ಪತಿ ಇತ್ತೀಚಿಗೆ ಮೃತಪಟ್ಟಿದ್ದರು. ಹೀಗಾಗಿ ಮತ್ತೆ ಇವರಿಬ್ಬರು ಸಂಬಂಧ ಇಟ್ಟುಕೊಂಡಿದ್ದರು. ಈ ಬಗ್ಗೆ ಕುಟುಂವದವರಿಗೆ ಗೊತ್ತಾಗಿದೆ. ಇದರಿಂದ ಭಯಗೊಂಡ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏನಿದು ಪ್ರಕರಣ?
ವಾರಂಗಲ್ ಪಟ್ಟಣದ ಅಂಬಾಲ ಗ್ರಾಮದ ರಮ್ಯಾ ಮತ್ತು ರಾಜು ಒಂದೇ ಗ್ರಾಮದವರಾಗಿದ್ದು, ಹತ್ತು ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಇಬ್ಬರು ಮನೆಯಿಂದ ಓಡಿ ಹೋಗಿದ್ದರು. ಆದರೆ ಇಬ್ಬರನ್ನು ಹುಡುಕಿ ಪಂಚಾಯಿತಿ ಮಾಡುವ ಮೂಲಕ ಹಿರಿಯರು ಇಬ್ಬರನ್ನು ಬೇರೆ ಬೇರೆ ಮಾಡಿದ್ದರು. ನಂತರ ರಮ್ಯಾ ಪೋಷಕರು ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ವಿವಾಹವಾದ ಕೆಲವು ದಿನಗಳ ನಂತರ ರಮ್ಯಾ ಪತಿ ಉದ್ಯೋಗಕ್ಕಾಗಿ ದುಬೈಗೆ ತೆರಳಿದ್ದರು. ಇತ್ತ ರಮ್ಯಾ ಇಬ್ಬರು ಮಕ್ಕಳೊಂದಿಗೆ ಅಂಬಾಲದಲ್ಲಿ ವಾಸಿಸುತ್ತಿದ್ದಳು.
ರಾಜು ಕೂಡ ಬೇರೆ ಹುಡುಗಿಯನ್ನು ಮದುವೆಯಾಗಿದ್ದು, ಈತನಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ರಾಜ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹೈದರಾಬಾದ್‍ನಲ್ಲಿ ವಾಸಿಸುತ್ತಿದ್ದನು. ರಮ್ಯಾ ಪತಿ 10 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ ರಾಜು ಕೂಡ ತನ್ನ ಗ್ರಾಮದಲ್ಲಿ ಮನೆ ನಿರ್ಮಿಸಲು ಹೈದರಾಬಾದಿನಿಂದ ಹಿಂದಿರುಗಿದ್ದನು. ಈ ವೇಳೆ ರಮ್ಯಾ ಪತಿ ಮೃತಪಟ್ಟಿರುವ ವಿಚಾರವನ್ನು ತಿಳಿದುಕೊಂಡಿದ್ದಾನೆ.
ತನ್ನ ಮಾಜಿ ಪ್ರೇಯಿಸಿಗೆ ಸಮಾಧಾನ ಮಾಡುವ ನೆಪದಲ್ಲಿ ಆಗಾಗ ರಮ್ಯಾ ಮನೆಗೆ ಹೋಗುತ್ತಿದ್ದನು. ಈ ವೇಳೆ ಮತ್ತೆ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ದೈಹಿಕ ಸಂಬಂಧ ಕೂಡ ಹೊಂದಿದ್ದರು. ಇವರಿಬ್ಬರ ಸಂಬಂಧದ ಬಗ್ಗೆ ಕುಟುಂಬದವರಿಗೆ ತಿಳಿದಿದೆ. ಇದರಿಂದ ಭಯಗೊಂಡು ರಾಜು ಮತ್ತು ರಮ್ಯಾ ನಾಲ್ಕು ದಿನಗಳ ಹಿಂದೆ ಓಡಿಹೋಗಿದ್ದಾರೆ. ಈ ಕುರಿತು ರಮ್ಯಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರಿಗಾಗಿ ಶೋಧ ನಡೆಸುತ್ತಿದ್ದರು.
ಕಳೆದ ದಿನ ನದಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ತಿಳಿದು ಪೊಲೀಸರು ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮೃತಪಟ್ಟಿದ್ದವರು ರಾಜು ಮತ್ತು ರಮ್ಯಾ ಎಂದು ಗುರುತಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇಬ್ಬರು ಗುರುವಾರ ಆಟೋದ ಮೂಲಕ ನದಿಯ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.