– ಪ್ರಾಣಕ್ಕೆ ಕುತ್ತು ತಂದ ಶೋಕಿ ಹುಚ್ಚು
ಬೆಳಗಾವಿ: ಶೋಕಿ ಹುಚ್ಚಿಗೆ ಯುವತಿ ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
19 ವರ್ಷದ ಜ್ಯೋತಿಯ ಶೋಕಿ ಹುಚ್ಚು ಆಕೆಯನ್ನ ಬಲಿ ಪಡೆದುಕೊಂಡಿದೆ. ತಂದೆ ಮನೆಗೆ ಸೋಫಾ ಸೆಟ್ ತರಲು ಒಪ್ಪದಕ್ಕೆ ಕೋಪದ ಕೈಯಲ್ಲಿ ಬುದ್ಧಿ ನೀಡಿದ ಜ್ಯೋತಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮೂರು ತಿಂಗಳ ಹಿಂದೆ ಪ್ರೀತಿಸಿದ ಹುಡುಗ ಉಚಗಾಂವ್ ಗ್ರಾಮದ ನಿಖಿಲ್ ಜೊತೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದಳು. ಮದುವೆ ಮಾಡಿಕೊಳ್ಳಬೇಕು ಅನ್ನುವಷ್ಟರಲ್ಲಿ ಲಾಕ್‍ಡೌನ್ ಆಗಿದ್ದರಿಂದ ಸರಳವಾಗಿ ನಡೆದಿತ್ತು. ಅದ್ಧೂರಿ ಮದುವೆ ಪ್ಲಾನ್ ಮಾಡಿಕೊಂಡಿದ್ದ ಜ್ಯೋತಿ ಕೊಂಚ ಮಂಕಾಗಿದ್ದಳು.
ಪತಿಯ ಮನೆಗೆ ಹೋದ ಮೇಲೆಯೂ ಜ್ಯೋತಿ ಯೋಚನೆಯಲ್ಲಿ ಮುಳುಗಿರುತ್ತಿದ್ದಳು. ಸದಾ ಐಷಾರಾಮಿ ಜೀವನ ನಡೆಸಿ, ನಾಲ್ಕು ಜನರ ಮಧ್ಯೆ ಗುರುತಿಸಿಕೊಳ್ಳಬೇಕೆಂಬ ಕನಸನ್ನ ಜ್ಯೋತಿ ಕಾಣುತ್ತಿದ್ದಳು. ಹೀಗೆ ನಾಲ್ಕು ದಿನಗಳ ಹಿಂದೆ ತವರಿಗೆ ಬಂದ ಜ್ಯೋತಿ ತಂದೆಗೆ ಕುಳಿತುಕೊಳ್ಳಲು ಸೋಫಾ ಸೆಟ್ ತರುವಂತೆ ಒತ್ತಾಯಿಸಿದ್ದಾಳೆ. ಮಗಳಿಗೆ ಸಪ್ರ್ರೈಸ್ ಕೊಡುವ ಉದ್ದೇಶದಿಂದ ತಂದೆ ಮುಂದೆ ಖರೀದಿಸೋಣ ಎಂದು ಹೇಳಿದ್ದಾರೆ.
ಮರುದಿನ ಬೆಳಗ್ಗೆ ತಂದೆ-ತಾಯಿ ಮಗಳ ಆಸೆಯಂತೆ ಸೋಫಾ ಸೆಟ್ ತರಲು ಮಾರುಕಟ್ಟೆಗೆ ತೆರಳಿದ್ದಾರೆ. ಸೋಫಾ ತಂದು ಮಗಳನ್ನ ಕೂಗಿದರು ಜ್ಯೋತಿ ಕೋಣೆಯಿಂದ ಹೊರ ಬಂದಿಲ್ಲ. ಅನುಮಾನಗೊಂಡ ಪೋಷಕರು ಬಾಗಿಲು ಒಡೆದಾಗ ಜ್ಯೋತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳೆ. ಪುತ್ರಿಗೆ ಸಪ್ರ್ರೈಸ್ ನೀಡಬೇಕೆಂದು ಪ್ಲಾನ್ ಮಾಡಿದ್ದ ಪೋಷಕರಿಗೆ ದೊಡ್ಡ ಆಘಾತವನ್ನ ನೀಡಿದ ಜ್ಯೋತಿ ಪ್ರಾಣ ಕಳೆದುಕೊಂಡಿದ್ದಾಳೆ. ಇದೀಗ ಜ್ಯೋತಿ ಪೋಷಕರು ಮಗಳ ಫೋಟೋ ಹಿಡಿದು ಅದೇ ಸೋಫಾದ ಮೇಲೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.