ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಂದು ಹೂತಿಟ್ಟ ಪತ್ನಿ- ಮೂವರ ಬಂಧನ

Public TV
2 Min Read

ಕೋಲಾರ: ಪುಟ್ಟ ಸುಂದರ ಸಂಸಾರ ಕಟ್ಟಿಕೊಂಡು ಕನಸು ಕಾಣುತ್ತಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯತಮನ ಸಹಾಯದಿಂದ ಕೊಲೆ ಮಾಡಿ ಹೂತಿಟ್ಟ ಘಟನೆ ಜಿಲ್ಲೆ ಬಂಗಾರಪೇಟೆ ತಾಲೂಕು ಬಾವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾವರಹಳ್ಳಿ ಗ್ರಾಮದ ಬಳಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ಪ್ರಕರಣಕ್ಕೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಆ.16ರ ಸಂಜೆ ಕೊಲೆ ಮಾಡಿ ಹೂತ್ತಿದ್ದ ಮೃತ ದೇಹ ಪತ್ತೆಯಾಗಿತ್ತು. ಪೊಲೀಸರ ತನಿಖೆ ವೇಳೆ ಅಪರಿಚಿತ ಮೃತದೇಹ ಕೋಲಾರ ತಾಲೂಕು ಜನ್ನಘಟ್ಟ ನಿವಾಸಿ ಪ್ರಭಾಕರ್ ಎಂದು ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಹೂತಿಟ್ಟಿದ್ದ ಶವದ ಎರಡು ಕಾಲುಗಳು ಕೊಲೆಯ ಸುಳಿವನ್ನು ನೀಡಿತ್ತು.

ಕೊಲೆಯಾ ಪ್ರಭಾಕರ್ ಮೂಲತಃ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದವನು. ಈತ ಬಂಗಾರಪೇಟೆ ತಾಲೂಕು ಕೂಟೇರಿ ಗ್ರಾಮದ ಮಮತ ಎಂಬಾಕೆಯನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಈ ನಡುವೆ ಅವರ ಕುಟುಂಬದಲ್ಲಿ ಕಲಹವೊಂದು ಆರಂಭವಾಗಿತ್ತು. ಮಮತ ಗಾರ್ಮೆಂಟ್ಸ್‍ನಲ್ಲಿ ಕೆಲಸಕ್ಕೆ ಹೋಗುವುದು ಪ್ರಭಾಕರ್‍ಗೆ ಇಷ್ಟವಿರಲಿಲ್ಲ ಹಾಗಾಗಿ ತಾನು ಕೆಲಸಕ್ಕೆ ಹೋಗಲೇ ಬೇಕು ಎಂದು ಪಟ್ಟು ಹಿಡಿದಿದ್ದ ಮಮತಾ ಗಂಡನನ್ನು ಬಿಟ್ಟು ಕೋಲಾರದಲ್ಲಿ ಮನೆ ಮಾಡಿಕೊಂಡಿದ್ದಳು.

ಈ ನಡುವೆ ಕುಟುಂಬಸ್ಥರು ರಾಜಿಪಂಚಾಯ್ತಿ ಮಾಡಿ ಸರಿ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಆರು ತಿಂಗಳಿಂದ ತನ್ನ ತವರು ಮನೆಗೆ ಹೋಗಿದ್ದಳು. ಈ ನಡುವೆ ಹಿರಿಯರು ಮಮತಾ ಪತಿಯ ಊರಿನಲ್ಲಿರಬೇಕು ಎಂದು ಆಗಸ್ಟ್ 14 ರಂದು ತೀರ್ಮಾನ ಮಾಡಿದ್ದರು. ಅದರಂತೆ ಮಮತಾಳನ್ನು ಕರೆತರಲು ಹೋಗಿದ್ದ ಪ್ರಭಾಕರ್ ಅಲ್ಲಿ ನಿಗೂಢವಾಗಿ ಕೊಲೆಯಾಗಿದ್ದ.

ಗಂಡನ ಮನೆ ಬಿಟ್ಟಿದ್ದ ಮಮತಾ ನಿತ್ಯ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ ಆಟೋ ಡ್ರೈವರ್ ಶ್ರೀಧರ್ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ನಡುವೆ ತನ್ನನ್ನು ಕೆರೆದುಕೊಂಡು ಹೋಗಲು ಗಂಡ ಬರುವ ವಿಷಯ ತಿಳಿದ ಮಮತ ತನ್ನ ಪ್ರಿಯಕರ ಶ್ರೀಧರ್ ಮತ್ತು ಆತನ ಸ್ನೇಹಿತ ಅಶೋಕ್ ಸೇರಿ ಸಂಚು ರೂಪಿಸಿ ಬಾವರಹಳ್ಳಿ ಬಳಿ ನೀಲಗಿರಿ ತೋಪಿನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಅಲ್ಲೇ ಗುಂಡಿ ತೆಗೆದು ಮುಚ್ಚಿಹಾಕಿದ್ದರು. ಆದರೆ ಆಗಸ್ಟ್ 16 ರಂದು ಬಂಗಾರಪೇಟೆ ಪೊಲೀಸರಿಗೆ ಶವ ಪತ್ತೆಯಾಗಿದ್ದ ಮಾಹಿತಿ ಲಭಿಸಿತ್ತು.

ಅಪರಿಚಿತ ಶವ ಎಂದು ಮೊದಲು ಪ್ರಕರಣ ದಾಖಲಿಸಿಕೊಂಡಿದ್ದ ಬಂಗಾರಪೇಟೆ ಪೊಲೀಸರಿಗೆ ಪ್ರಭಾಕರ್ ನಾಪತ್ತೆಯಾಗಿದ್ದ ಬಗ್ಗೆ ಮಾಹಿತಿ ಲಭಿಸಿತ್ತು. ಆಗಸ್ಟ್ 14 ರಂದು ಮನೆಬಿಟ್ಟು ತೆರಳಿದ್ದ ಮರಳಿ ಬಂದಿಲ್ಲ ಎಂದು ಆತನ ಪೋಷಕರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಕೊಲೆ ಆರೋಪಿಗಳಾದ ಶ್ರೀಧರ್, ಆತನ ಸ್ನೇಹಿತ ಅಶೋಕ್, ಪ್ರಭಾಕರ್ ಪತ್ನಿ ಮಮತಾಳನ್ನು ಬಂಧಿಸಿರುವ ಬಂಗಾರಪೇಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *