ಪ್ರಿಯಕರನ ಜೊತೆ ಸೇರಿ ಸೋದರನ ಕೊಲೆ ಪ್ರಕರಣ – ಸಾವಿರ ಪುಟಗಳ ಚಾರ್ಜ್ ಶೀಟ್

Public TV
3 Min Read

– ಪ್ರೀತಿಗೆ ಅಡ್ಡ ಬಂದ ಅಣ್ಣನ ಕೊಲೆ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿದ್ದ ರುಂಡ ಮುಂಡ ಪ್ರಕರಣದಲ್ಲಿ ನಟಿ ಶನಯಾ ಕಾಟವೇ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಸಾವಿರ ಪುಟ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ರಾಕೇಶ್ ಕಾಟವೆ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೊಲೆಯಾಗಿರುವ ರಾಕೇಶ ಕಾಟವೆ ಡಿಎನ್‍ಎ ವರದಿಯ ನಿರೀಕ್ಷೆಯಲ್ಲಿದ್ದಾರೆ. ಸಿನಿಮಾ ನಟಿ, ಮಾಡಲ್ ಸೋನಿಯಾ ಅಲಿಯಾಸ್ ಶನಾಯ ಕಾಟವೆ ಸಹೋದರ ರಾಕೇಶ್ ಕಾಟವೆಯನ್ನ ಕಳೆದ ಏಪ್ರಿಲ್ 9ರಂದು ಹತ್ಯೆ ಮಾಡಲಾಗಿತ್ತು. ರಾಕೇಶ್ ಕಾಟವೆಯನ್ನ ಹತ್ಯೆ ಮಾಡಿ ರುಂಡ ಮುಂಡ ಬೇರ್ಪಡಿಸಿ ದೇಹದ ಭಾಗಗಳನ್ನ ಬೇರೆ ಪ್ರದೇಶಗಳಲ್ಲಿ ಎಸೆದು ಹೋದ ಬಗ್ಗೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಹಾಗೂ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಇದನ್ನೂ ಓದಿ: ಛೋಟಾ ಬಾಂಬೆ ಚಿತ್ರದ ನಟಿ, ಮಾಜಿ ಗಗನಸಖಿ, ಮಿಸ್ ಕರ್ನಾಟಕ ಅರೆಸ್ಟ್

ಈ ಹತ್ಯೆಗೆ ಆಸ್ತಿಯೂ ಒಂದು ಪ್ರಮುಖ ಕಾರಣ, ಶನಾಯ ಹೆಸರಲ್ಲಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಾಗಿ ನಿಯಾಜ್ ಪ್ರೀತಿಯ ಸೋಗು ಹಾಕಿದ್ದ. ಇದಕ್ಕೆ ಅಡ್ಡಿಯಾಗಿದ್ದ ರಾಕೇಶ್‍ನನ್ನು ಕೊಲೆ ಮಾಡಿದ್ದ. ಶನಾಯ ಕಾಟವೆ ಪ್ರಿಯಕರ ನಿಯಾಜ್ ಕಾಟೀಗಾರ ಹಾಗೂ ಸಹಚರರು ಏಪ್ರಿಲ್ 9ರಂದು ಆಕೆಯ ಸಹೋದರ ರಾಕೇಶ್ ಕಾಟವೆಯನ್ನು ಹತ್ಯೆಗೈದಿದ್ದರು. ಆತನ ರುಂಡವನ್ನು ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡವನ್ನು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು.

ಏಪ್ರಿಲ್ 12ರಂದು ಹುಬ್ಬಳ್ಳಿಯ ಪೊಲೀಸರಿಗೆ ನಿರ್ಜನ ಪ್ರದೇಶದಲ್ಲಿ ರುಂಡ ಮುಂಡ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಹುಬ್ಬಳ್ಳಿ ಧಾರವಾಡದ ಪೊಲೀಸರು ಏಪ್ರಿಲ್ 18ರಂದು ಗ್ರಾಮೀಣ ಠಾಣೆ ಪೊಲೀಸರು ಪ್ರಮುಖ ಆರೋಪಿ ಬೆಂಗೇರಿಯ ನಿಯಾಜ್ ಸೈಫುದ್ದೀನ್ ಕಾಟೇಗಾರ, ತೌಸೀಫ್ ಚನ್ನಾಪುರ, ಅಲ್ತಾಫ ಮುಲ್ಲಾ ಹಾಗೂ ಅಮನ್ ಗಿರಣಿವಾಲೆ ಎಂಬುವರನ್ನು ಬಂಧಿಸಿದ್ದರು. ಬಳಿಕ ಮಲೀಕಜಾನ್, ಫಿರೋಜ್ ಕಾಟೀಗಾರ, ಸೈಫುದ್ದೀನ್ ಕಾಟೀಗಾರ ಹಾಗೂ ಶನಾಯ ಕಾಟವೆಯನ್ನು ಬಂಧಿಸಿದ್ದರು.

ರಾಕೇಶ್ ಕಾಟವೇ ಕೊಲೆಗೆ ನಟಿ ಹಾಗೂ ಮಾಡಲ್ ಶಾನಯಾ ಕಾಟವೇಯನ್ನ ಆರೋಪಿ ನಿಯಾಜ್ ಪ್ರೀತಿಸುತ್ತಿದ್ದಕ್ಕೆ ರಾಕೇಶ್ ವಿರೋಧ ವ್ಯಕ್ತಪಡಿಸಿದ್ದ. ಅಲ್ಲದೇ ನಟಿಯ ಆಸ್ತಿಯ ಮೇಲೆ ಕಣ್ಣು ಇಟ್ಟಿದ್ದ ಆರೋಪಿ ನಿಯಾಜ್, ರಾಕೇಶ್‍ನನ್ನ ಹತ್ಯೆ ಮಾಡಿ ರುಂಡ ಮುಂಡ ಬೇರ್ಪಡಿಸಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಸಾಕ್ಷಿ ನಾಶಕ್ಕೆ ಯತ್ನಿಸಿದ್ದರು. ಪ್ರಮುಖ ಆರೋಪಿ ನಿಯಾಜ್ ಕಾಟೀಗಾರ ಹಾಗೂ ಆತನ ಸಹಚರರು ಸಾಕ್ಷಿ ನಾಶ ಮಾಡಲು, ಪೊಲೀಸರ ಕಣ್ಣಪ್ಪಿಸಲು ತಂತ್ರ ಹೂಡಿದ್ದರು. ಕಾರಲ್ಲಿ ಶವ ಇಟ್ಟುಕೊಂಡು ವಿವಿಧೆಡೆ ಓಡಾಡಿದ್ದರು. ಶನಾಯ ತಾಯಿ ಹೆಸರಲ್ಲಿರುವ ಕೇಶ್ವಾಪುರದ ಸೈಟಲ್ಲೇ ರಾಕೇಶ್ ಶವ ಹೂತು ಹಾಕಲು ಸಂಚು ರೂಪಿಸಿದ್ದರು, ಅಲ್ಲದೇ ಸಿಸಿ ಕ್ಯಾಮರಾಗಳು ಬಂದ್ ಆದ ವೇಳೆಯೇ ಕಾರನಲ್ಲಿ ಪ್ರಯಾಣಿಸಿದ್ದ ಅಂಶಗಳು ಬಗ್ಗೆ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್‍ಸ್ಪೆಕ್ಟರ್ ರಮೇಶ ಗೋಕಾಕ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ 2ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಕೊಲೆಯಾದ ರಾಕೇಶ್‍ನ ಡಿಎನ್‍ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರು ಮತ್ತು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ. ವರದಿ ಬಂದ ಬಳಿಕ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ. ಕೊಲೆಯಾದ ರಾಕೇಶ್ ಕಾಟವೆಯನ್ನು ಶನಾಯ್ ಕಾಟವೆಯವರ ತಾಯಿ ದತ್ತು ಪಡೆದಿದ್ದರು ಎನ್ನಲಾಗಿದೆ. ಆದರೆ ಮೂಲ ಪಾಲಕರು ಯಾರು ಎಂಬುದೇ ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ.

ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟಿ ಶನಯಾ ಕಾಟವೆ ಹಾಗೂ 6 ನೇ ಆರೋಪಿ ನಿಯಾಜ್ ಸಹೋದರ ಫೀರೋಜ್ ಕಾಟೇಗಾರ ಹಾಗೂ 7ನೇ ಆರೋಪಿ ನಿಯಾಜ್ ತಂದೆ ಸೈಫುದ್ದೀನ್ ಕಾಟೇಗಾರಗೆ ಜಾಮೀನು ದೊರೆತಿದೆ.

Share This Article
Leave a Comment

Leave a Reply

Your email address will not be published. Required fields are marked *