ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ – ಕೈ ನಾಯಕರಿಗೆ ಸುಧಾಕರ್ ತಿರುಗೇಟು

Public TV
2 Min Read

ಬೆಂಗಳೂರು: ಕೊರೊನಾ ವಿಚಾರದಲ್ಲಿ ಬಿಜೆಪಿ ಸರ್ಕಾರ ಗೋಲ್‍ಮಾಲ್ ಮಾಡಿದೆ ಎಂಬ ಕಾಂಗ್ರೆಸ್ ನಾಯಕ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಅಸೂಯೆ ಅಧಃಪತನಕ್ಕೆ ನಾಂದಿ ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. ಈಗ ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುಧಾಕರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

ಇಷ್ಟು ವರ್ಷದ ರಾಜಕೀಯ ಅನುಭವದಲ್ಲಿ ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸಗೊತ್ತಿಲ್ಲ ಎಂದು ಕಾಣುತ್ತದೆ. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ವೆಚ್ಚದಲ್ಲಿ ಉಪಕರಣ ಖರೀದಿಯಾಗಿದೆ ಎಂದಿದ್ದಾರೆ. ಆದರೆ ಖರ್ಚು ಕೇವಲ 33 ಕೋಟಿ ರೂ. ಅಷ್ಟೇ, ಪ್ರಸ್ತಾವನೆ ಖರ್ಚಿನ ಲೆಕ್ಕ ಹೇಗೆ ಆಗುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.

ಜಗತ್ತಿನಲ್ಲಿ ನಾನೇ ಬಲ್ಲವನೆಂದು. ನಾನೇ ಸತ್ಯವಂತನೆಂದುಕೊಂಡರೆ ಅಂಥವರು ಎಲ್ಲರಿಗಿಂತಲೂ ಕೀಳಾಗುತ್ತಾರೆ. ಸೇವಾ ಕಾರ್ಯದಲ್ಲಿ ಪ್ರೀತಿ ಕರುಣೆ ಇರಬೇಕೆ ಹೊರತು ಪ್ರತಿಷ್ಠೆ ಕೀರ್ತಿ ಮತ್ತು ಕಾಮನೆಗಳಲ್ಲ. ಅಸೂಯೆ ಅಧಃಪತನಕ್ಕೆ ನಾಂದಿ. ಸತ್ಯ ಯಾವತ್ತು ಧಾನ್ಯವಿದ್ದಂತೆ, ಸುಳ್ಳು ತೌಡಿದ್ದಂತೆ. ಜನರಿಗೆ ಗಟ್ಟಿ, ಜೊಳ್ಳು ಯಾವುದು ಎಂದು ಗೊತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಅಂತ ನಾವು ದಾಖಲೆಗಳನ್ನು ಬಿಡುಗಡೆ ಮಾಡಿದರೂ ಮಾನ್ಯ ವಿರೋಧ ಪಕ್ಷದ ನಾಯಕರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಜ ಸತ್ಯದ ಅರಿವಾಗುವ ತನಕ ನೀವು ತಿಳಿದಿರುವ ಸತ್ಯವೆಲ್ಲವೂ ಕಾಲ್ಪನಿಕ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ.

ಒಟ್ಟು ನಾಲ್ಕು ಸರಣಿ ಟ್ವೀಟ್ ಮಾಡಿರುವ ಸುಧಾಕರ್, ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ. ಜನರಿಗೆ ಸತ್ಯಯಾವುದು ಸುಳ್ಳು ಯಾವುದು ಗೊತ್ತಿದೆ. ಯಾರೂ ಬೇಕಾದರೂ ಲೆಕ್ಕ ಕೇಳಿದರೂ ನಮ್ಮ ಬಳಿ ಸರಿಯಾದ ದಾಖಲೆಗಳಿವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *