ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ನೂತನ ಯಕ್ಷಗಾನ ಮೇಳ

Public TV
2 Min Read

– ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ
– ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯೊಂದಿಗೆ ಹೊಸ ಯಕ್ಷಗಾನ ಮೇಳ ಆರಂಭಗೊಂಡಿದ್ದು, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ರಂಗಸ್ಥಳದಲ್ಲಿ ಮೇಳೈಸಲಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ಹೊರ ಬಂದ ಬಳಿಕ ಪಟ್ಲ ಅವರು ಹೊಸ ಯಕ್ಷಗಾನ ಮೇಳ ಮಾಡುತ್ತಾರೆ ಎಂಬ ಸುದ್ದಿ ಇತ್ತು, ಅದು ಈಗ ನಿಜವಾಗಿದೆ. ನವೆಂಬರ್ ತಿಂಗಳ 27ರಿಂದ ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರದರ್ಶನ ಆರಂಭವಾಗಲಿದೆ ಎಂದು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಹೇಳಿದ್ದಾರೆ.

ಮೇಳದ ಯಕ್ಷಗಾನ ಪ್ರದರ್ಶನವು ಕಾಲಮಿತಿಯದ್ದಾಗಿದ್ದು, ಸಾಮಾನ್ಯವಾಗಿ ಸಂಜೆ 6 ಗಂಟೆಯಿಂದ 11ರವರೆಗಿನ ಅವಧಿಯಲ್ಲಿ ನಡೆಯಲಿದೆ. ಈ ಎಲ್ಲಾ ಪ್ರದರ್ಶನಗಳನ್ನು ಕೋವಿಡ್-19ರ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ ನಿರ್ದೇಶನಗಳಿಗೆ ಒಳಪಟ್ಟು ನಡೆಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.

ನೂತನ ಮೇಳದ ಕಲಾವಿದರು
ಪಾವಂಜೆ ಜ್ಞಾನಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರು ಪ್ರಧಾನ ಭಾಗವತರಾಗಿದ್ದು, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತಿಕೆಯಲ್ಲಿ ಸಾಥ್ ನೀಡಲಿದ್ದಾರೆ. ಹಿಮ್ಮೇಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಉಜಿರೆ ನಾರಾಯಣ, ಸಂದೇಶ್ ಮಂದಾರ ಹಾಸ್ಯ ಪಾತ್ರಧಾರಿಗಳಾಗಿ ಬಣ್ಣ ಹಚ್ಚಲಿದ್ದಾರೆ.

ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು ಸ್ತ್ರೀಪಾತ್ರಧಾರಿಗಳಾಗಲಿದ್ದಾರೆ. ಪ್ರಧಾನ ವೇಷಧಾರಿಗಳಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮತ್ತಿತರು ಇರಲಿದ್ದಾರೆ.

ದೇವಿ ಮಹಾತ್ಮೆ ಪ್ರದರ್ಶನಕ್ಕಾಗಿಯೇ ತಂಡ
ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಸತೀಶ್ ಪಟ್ಲರಿಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಸಾಕಷ್ಟು ಪ್ರಖ್ಯಾತಿ ತಂದು ಕೊಟ್ಟಿದ್ದು, ಇಲ್ಲಿಯೂ ಕೂಡ ದೇವಿ ಮಹಾತ್ಮೆ ಪ್ರಸಂಗಕ್ಕೆ ಕಲಾವಿದರು ಸೆಟ್ ಆದಂತೆ ಇದ್ದಾರೆ. ಅಕ್ಷಯ್ ಕುಮಾರ್ ದೇವಿ, ರಾಜೇಶ್ ನಿಟ್ಟೆ ಮಾಲಿನಿ, ಸತೀಶ್ ನೈನಾಡು ಮಹಿಷಾಸುರ, ರಾಧಾಕೃಷ್ಣ ನಾವಡ ರಕ್ತಬೀಜ, ಲೋಕೇಶ್ ಮುಚ್ಚೂರು ಮತ್ತು ಬೆಳ್ಳಿಪಾಡಿ ಮೋಹನ್ ಚಂಡ- ಮುಂಡರು ಹೀಗೆ ದೇವಿ ಮಹಾತ್ಮೆ ಪ್ರಸಂಗಕ್ಕೆ ಸೆಟ್ ಆಗುವಂತೆ ಕಲಾವಿದರ ಆಯ್ಕೆ ಆದಂತೆ ಇದೆ.

ಯಕ್ಷಗಾನದ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಅವರ ಕಂಠಸಿರಿಯನ್ನು ಅವರೇ ನೇತೃತ್ವವಹಿಸಿದ ಯಕ್ಷಗಾನ ಮೇಳದೊಂದಿಗೆ ನೋಡಿ ಆನಂದಿಸಲು ಅವರ ಅಭಿಮಾನಿಗಳು ಕಾತುರರಾಗಿರೋದಂತು ಸತ್ಯ. ಹಿಂದಿನಿಂದಲೂ ಪಾವಂಜೆ ಕ್ಷೇತ್ರ ಯಕ್ಷಗಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಇಲ್ಲಿಂದ ಹೊರಡುವ ನೂತನ ಮೇಳ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *