ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

Public TV
2 Min Read

ಬೆಂಗಳೂರು: ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂದು ಅವಧೂತ ವಿನಯ್ ಗುರೂಜಿ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಗರಂ ಆಗಿದ್ದಾರೆ.

ಈ ವಿಚಾರವಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ರಘು ಆಚಾರ್, ಅಭಿಮಾನಿಗಳಿಂದ ಅವಧೂತರೆನಿಸಿಕೊಂಡಿರುವ ವಿನಯ್ ಗುರೂಜಿ ಗೌರಿಗದ್ದೆ ನಿಮಗೊಂದು ಬಹಿರಂಗ ಬಿನ್ನಹ. ಇಷ್ಟಕ್ಕೂ ಇಂತಹದೊಂದು ಬಹಿರಂಗ ಬಿನ್ನಹ ಬರೆಯಲು ಪ್ರಚೋದಿಸಿದ್ದು, ಸೋಮವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಮ್ಮ ಹಾಗೂ ನಿಮ್ಮ ಶಿಷ್ಯರ ನಡವಳಿಕೆ ಎಂದು ದೂರಿದ್ದಾರೆ.

https://www.facebook.com/RaghuAcharG/posts/135567878217937

ಪತ್ರದಲ್ಲಿ ಏನಿದೆ?
ಭೂತ ಭವಿಷ್ಯ ಬಲ್ಲ ನಿಮಗೆ ಗೊತ್ತಿರುವಂತೆಯೇ ಇಡೀ ಜಗತ್ತನ್ನು ಇಂದು ಕೊರೊನಾ ಎಂಬ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ.

ಇಂತಹ ಮಹಾಮಾರಿಯಿಂದ ವೈಯಕ್ತಿಕವಾಗಿ ನಮ್ಮನ್ನು ಹಾಗೂ ನಮ್ಮ ಸುತ್ತಮುತ್ತಲೂ ಇರುವವರನ್ನು ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ನಮ್ಮ ದೇಶದ ಸರ್ಕಾರಗಳು ಕೆಲವೊಂದು ಸಾರ್ವಜನಿಕ ನಡವಳಿಕೆಯನ್ನು ನಿಯಮದಂತೆ ವಿಧಿಸಿವೆ. ಅದರಲ್ಲಿ ಮುಖ್ಯವಾದವು ನಮ್ಮ ಉಸಿರು ಅನ್ಯರಿಗೆ ತಗುಲದಂತೆ ಮಾಸ್ಕ್ ಧರಿಸುವುದು ಹಾಗೂ ನಮ್ಮ ಉಗುಳು ಅನ್ಯರಿಗೆ ತಾಗದಂತೆ ವರ್ತಿಸುವುದು. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮಹಾಮಹೀಮರಾದ ತಮ್ಮಿಂದ ಹಾಗೂ ತಮ್ಮ ಶಿಷ್ಯರಿಂದ ಈ ಎರಡು ನಿಯಮಗಳ ಬಹಿರಂಗ ಉಲ್ಲಂಘನೆಗೊಂಡು ನಿಜಕ್ಕೂ ಅಚ್ಚರಿ ಹಾಗೂ ಗಾಬರಿ ಮೂಡಿತು.

ನೀವು ಮಾಸ್ಕ್ ತೊಡದೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದಿರಿ. ಆಶೀರ್ವಾದ ಮಾಡುತ್ತಿದ್ದಿರಿ. ಮದುವೆಯ ಊಟ ಮಾಡಿದ ನಂತರ ತಾವು ತಿಂದುಂಡು ಬಿಟ್ಟ ಆಹಾರವನ್ನು ನಿಮ್ಮ ಶಿಷ್ಯರೂ ಎಲ್ಲರಿಗೂ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು. ಗೌರವ, ನಂಬಿಕೆ, ಭಕ್ತಿ ಇವೆಲ್ಲ ಇರಲಿ, ಇರಬೇಕು. ಒಪ್ಪುತ್ತೇನೆ. ಆದರೆ ಕೊರೊನಾದಂತಹ ಮಾರಕ ಸನ್ನಿವೇಶದಲ್ಲಿ ಇಂತಹದೊಂದು ನಡವಳಿಕೆಯನ್ನು ನಿಮ್ಮ ಹಾಗೂ ನಿಮ್ಮ ಶಿಷ್ಯರಿಂದ ಕಂಡು ನನಗೆ ನಂಬಿಕೆಯೇ ಬರಲಿಲ್ಲ.

ನಿಮ್ಮ ಶಿಷ್ಯರ ನಡವಳಿಕೆ ನಿಮ್ಮ ಗಮನಕ್ಕೆ ಬರದೇ ಈ ಅಚಾತುರ್ಯ ನಡೆಯುತ್ತಿರಬಹುದು ಎಂದು ಭಾವಿಸಿ ಈ ಬಗ್ಗೆ ವಿಚಾರಿಸಿದೆ. ಆಗ ಇದು ನಿಮ್ಮ ಗಮನಕ್ಕೆ ಬಂದೇ ನಡೆಯುತ್ತಿದೆ ಎಂದು ಕೇಳಿಪಟ್ಟೆ. ಇದು ನಿಜಕ್ಕೂ ಆಘಾತ ತರುವಂತಹ ವಿಚಾರ. ಕೊರೊನಾ ಕಾಲದಲ್ಲಿ ನಿಮ್ಮಿಂದ ಇಂತಹ ನಡವಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದರೂ ಜನರ ಜೀವಕ್ಕೆ ಅಪಾಯ ತರುವಂತಹ ಆ ಬೇಜವಾಬ್ದಾರಿ ನಡವಳಿಕೆಯನ್ನು ಖಂಡಿಸದೆ ನನಗೆ ಬೇರೆ ವಿಧಿಯಿಲ್ಲ.

ದಯಮಾಡಿ ಈ ವರ್ತನೆಯನ್ನು ಬದಲಾಯಿಸಿಕೊಳ್ಳಿ. ತನ್ಮೂಲಕ ನೀವು ಕೊಟ್ಟಿದ್ದನ್ನು ಪ್ರಸಾದ ಎಂದು ಭಾವಿಸುವ ಜನರ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಇನ್ನಾದರೂ ನಿಲ್ಲಿಸುವಂತೆ ಕೋರುತ್ತೇನೆ ಎಂದು ರಘು ಆಚಾರ್ ಬಹಿರಂಗ ಪತ್ರವನ್ನು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *