ಪ್ರವಾಹ ಹಾನಿ ವೀಕ್ಷಿಸಲು ಬಾರದ ಕಾಗೇರಿ, ಕ್ಷೇತ್ರದಲ್ಲಿ ಸಂಸದರೂ ನಾಪತ್ತೆ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ರಿಂದ ಸುರಿದ ಭಾರೀ ಮಳೆ ಜಿಲ್ಲೆಯ ಐದು ತಾಲೂಕುಗಳ ಜನರನ್ನು ತತ್ತರಿಸುವಂತೆ ಮಾಡಿದೆ. ಇಷ್ಟೆಲ್ಲ ಹಾನಿಯಾದರೂ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ವರೆಗೆ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ.

ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿ ಪ್ರವಾಹದಿಂದ ಆದ ಅನಾಹುತಕ್ಕೆ ಸ್ಥಳ ಪರಿಶೀಲನೆ ನಡೆಸಿ, ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯವರೇ ಪ್ರಮಾಣವಚನ ಸ್ವೀಕರಿಸಿ 24 ಘಂಟೆಯೊಳಗಾಗಿ ಖುದ್ದು ಉತ್ತರ ಕನ್ನಡ ಜಿಲ್ಲೆಯ ಪ್ರವಾಹದಿಂದ ಹಾನಿಯಾದ ಕ್ಷೇತ್ರಕ್ಕೆ ಭೇಟಿ ನೀಡಿ ತಕ್ಷಣದಲ್ಲಿ ಪರಿಹಾರಕ್ಕೆ ಸೂಚನೆ ಸಹ ನೀಡಿದ್ದಾರೆ. ಆದರೆ ಪ್ರವಾಹದಿಂದ ತೊಂದರೆಗೊಳಗಾದ ಶಿರಸಿ-ಸಿದ್ದಾಪುರ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ವರೆಗೂ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ತೊಂದರೆಗೊಳಗಾದ ಪ್ರದೇಶಗಳನ್ನು ವೀಕ್ಷಿಸುವ ಕೆಲಸ ಸಹ ಮಾಡಿಲ್ಲ.

ಶಿರಸಿ-ಸಿದ್ದಾಪುರದಲ್ಲಿ ಹಾನಿಯಾಗಿದ್ದೆಷ್ಟು?
ಸಿದ್ದಾಪುರ ತಾಲೂಕಿನಲ್ಲಿ 5 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ. 11 ಮನೆಗಳು ಸಂಪೂರ್ಣ ಕುಸಿದು ನಷ್ಟವಾಗಿವೆ. 36 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 65 ರಸ್ತೆಗಳು ಹಾನಿಯಾಗಿವೆ. ಶಿರಸಿಯಲ್ಲಿ 2 ಗ್ರಾಮಗಳು ಮಳೆಯಿಂದ ತೊಂದರೆಗೊಳಗಾಗಿದ್ದು, 108 ಮನೆಗಳು ಕುಸಿತ ಕಂಡಿವೆ. 2 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 77.95 ಕಿ.ಮೀ.ರಸ್ತೆ ಹಾಳಾಗಿದೆ. 8 ಸೇತುವೆಗಳು, 14 ಶಾಲೆಗಳು ಮಳೆಯಿಂದ ಹಾನಿಯಾಗಿದೆ. ಹಿಂದಿನ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕಾಗೇರಿಯವರು ತಮ್ಮನ್ನು ಸತತ ಆರು ಬಾರಿ ಗೆಲ್ಲಿಸಿದ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ಬೆಂಗಳೂರಿನ ರಾಜಕೀಯದಲ್ಲಿ ತಲ್ಲೀನರಾಗಿದ್ದಾರೆ.

ಸಂಸದರೂ ಮಾಯ
ಕಳೆದ ತಿಂಗಳು ಪ್ರವಾಹ ಪ್ರಾರಂಭಕ್ಕೂ ಮುನ್ನ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಂಸದ ಅನಂತಕುಮಾರ್ ಹೆಗಡೆ ಇದಾದ ನಂತರ ಚಿಕ್ಕಪುಟ್ಟ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನು ಹಲವು ತಿಂಗಳಿಂದ ಅನಾರೋಗ್ಯದ ಕಾರಣ ದೆಹಲಿ ಮತ್ತು ಶಿರಸಿಯ ತಮ್ಮ ನಿವಾಸದಲ್ಲಿ ರೆಸ್ಟ್ ಮಾಡಿದ್ದರು. ಆದರೆ ಇದೀಗ ಅವರು ಚೇತರಸಿಕೊಂಡಿದ್ದಾರೆ. ಹೀಗಿರುವಾಗ ತಮ್ಮ ಕ್ಷೇತ್ರದ ಜನರು ನೋವಿನಲ್ಲಿರುವಾಗ ಹೃದಯವಂತಿಕೆಯನ್ನು ಸಹ ಮರೆತಿರುವುದು ಇದೀಗ ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *